ಕಸದಿಂದ ಬದುಕು ಕಟ್ಟಿಕೊಂಡ ಮಹಿಳೆಯರು

ಕಸ ಎಂಬುದು ವೇಸ್ಟ್ ಅಲ್ಲ, ಅದರಿಂದಲೂ ರಸ ತೆಗೆಯಬಹುದು ಎಂಬುದನ್ನು ಇಲ್ಲಿನ ಮಹಿಳೆಯರು ತೋರಿಸಿಕೊಟ್ಟಿದ್ದಾರೆ. ಉಡುಪಿಯ ಮಹಿಳೆಯರ ತಂಡವೊಂದು ಒಣ ತ್ಯಾಜ್ಯದ ವ್ಯವಹಾರ ಆರಂಭಿಸಿ ತಮ್ಮ ಬದುಕನ್ನು ಕಟ್ಟಿಕೊಂಡಿದೆ.
2006ರಲ್ಲಿ 10-15 ಮಹಿಳೆಯರ ಉಡುಪಿ ಶ್ರೀಸಿದ್ಧಿ ನಗರ ಶ್ರೀಶಕ್ತಿ ಸ್ವಸಹಾಯ ಸಂಘವು ಉಡುಪಿ ನಗರಸಭೆಯ ನಿರ್ಮಲ ನಗರ ಯೋಜನೆಯಡಿ ಕೆಲವೊಂದು ವಾರ್ಡ್ ಗಳಿಂದ ಒಣ ಕಸ ಸಂಗ್ರಹಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು. ಹೀಗೆ ಸಂಗ್ರಹಿಸಿದ ಕಸಗಳನ್ನು ತಂಡ ವಿಲೇವಾರಿ ಮಾಡುತ್ತಿತ್ತು. ಆದರೆ 2016ರಲ್ಲಿ ಕಸದ ಕುರಿತ ವೆಲ್ಲೂರು ಶ್ರೀನಿವಾಸ ನೀಡಿದ ಮಾಹಿತಿಯಂತೆ ಈ ತಂಡ, ಒಣ ಕಸದಿಂದ ವ್ಯವಹಾರ ಆರಂಭಿಸುವ ಮಹತ್ತರ ಹೆಜ್ಜೆಯನ್ನು ಇಟ್ಟಿತ್ತು.
ಇವರು ಮನೆ ಮನೆಗಳಿಂದ ಸಂಗ್ರಹಿಸಿದ ಒಣ ತ್ಯಾಜ್ಯಗಳಲ್ಲಿ ಪ್ಲಾಸ್ಟಿಕ್(ಮಿಲ್ಕ್, ಕಲರ್, ಪ್ಲೈನ್ ಪ್ಲಾಸ್ಟಿಕ್), ರಟ್ಟು, ಇಲೆಕ್ಟ್ರಾನಿಕ್ಸ್ ಸಲಕರಣೆ ಸೇರಿದಂತೆ ಒಟ್ಟು 17 ಬಗೆಯ ವಸ್ತುಗಳನ್ನು ಪ್ರತ್ಯೇಕ ಮಾಡಿ, ಅವುಗಳನ್ನು ಮಾರಾಟ ಮಾಡಿ ವ್ಯವಹಾರ ನಡೆಸುತ್ತಿದ್ದಾರೆ.
ಬೀಡಿನಗುಡ್ಡೆಯಲ್ಲಿ ನಗರಸಭೆ ನೀಡಿದ ಕಟ್ಟಡದಲ್ಲಿ ಇವರು ಈ ವ್ಯವಹಾರ ಮಾಡುತ್ತಿದ್ದು, ಇಲ್ಲಿ 17 ಬಗೆಯ ತ್ಯಾಜ್ಯವನ್ನು ಯಂತ್ರದ ಮೂಲಕ ಬೇಲಿಂಗ್ ಮಾಡಿ, ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದಾರೆ.
‘ಇದರಿಂದ ಕೈತುಂಬ ಸಂಬಳ ಸಿಗದಿದ್ದರೂ ನಾವೇ ಸೇರಿ ವ್ಯವಹಾರ ಮಾಡುತ್ತಿದ್ದೇವೆ ಎಂಬ ಹೆಮ್ಮೆ ಇದೆ. ಅಲ್ಲದೆ ನಮ್ಮಿಂದ 10 ಕುಟುಂಬಗಳು ಬದುಕು ನಡೆಸುತ್ತಿವೆ ಎಂಬ ಖುಷಿ ಕೂಡ ಇದೆ’ ಎನ್ನುತ್ತಾರೆ ಸಂಘದ ಪ್ರಮುಖರಾದ ಚಂದ ಆನಂದ್ ಅಂಚನ್.