ಮಹಿಳೆಯರ ಸಾಧನೆಗೆ ಶಕ್ತಿ ತುಂಬಿದ ಸ್ತ್ರೀ ಶಕ್ತಿ ಸಂಘಗಳು
ಶಮೀಮ, ಲತಾ ,ಸಾವಿತ್ರಿ ಕೈ ಹಿಡಿದ ಸ್ವ ಉದ್ಯೋಗ
ಮಂಗಳೂರು: ಸ್ತ್ರೀ ಶಕ್ತಿ ಸಂಘಗಳ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡ ನೂರಾರು ಮಹಿಳಾ ಸಾಧಕರು ದ.ಕ. ಜಿಲ್ಲೆಯ ವಿವಿಧ ಕಡೆ ಕಾಣ ಸಿಗುತ್ತಾರೆ. ಅಂತಹ ಸಾಧಕರಲ್ಲಿ ಶಮೀಮ, ಲತಾ, ಸಾವಿತ್ರಿಯವರೂ ಸೇರಿದ್ದಾರೆ. ಮಹಿಳೆಯರು ತಮಗಾಗಿಯೇ ಪರಸ್ಪರ ಸಹಾಯ ಮಾಡಿಕೊಳ್ಳುವ ನಿಟ್ಟಿನಲ್ಲಿ ರಚನೆಯಾದ ಸ್ತ್ರೀ ಶಕ್ತಿ ಸಂಜೀವಿನಿ ಸ್ವ ಸಹಾಯ ಸಂಘದ ಮೂಲಕ ಸ್ವ ಉದ್ಯೋಗದಿಂದ ಸಮಾಜದಲ್ಲಿ ಗುರುತಿಸಿಕೊಂಡಿರುವ ಈ ಮಹಿಳೆಯರ ಯಶೋಗಾಥೆ ಸಮಾಜದ ಇತರ ಮಹಿಳೆಯರಿಗೂ ಪ್ರೇರಣಾದಾಯಕವಾಗಿದೆ.
ಸ್ವಂತ ಅಂಗಡಿ ತೆರೆದು ಸ್ವಾವಲಂಬಿಯಾದ ಶಮೀಮ:
ಉಳ್ಳಾಲ ತಾಲೂಕಿನ ಕುಕ್ಕುದಕಟ್ಟೆ ನವಗ್ರಾಮ ಬಾಳೆಪುಣಿ ಗ್ರಾಮದ ನಿವಾಸಿ ಶಮೀಮ ಮುಹಮ್ಮದ್ ರಫೀಕ್‌ರವರು ಬಾಳೆಪುಣಿ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯೆ. ಮನೆ ಸಮೀಪದ ಅಂಗನವಾಡಿಯಲ್ಲಿ 20 ಸದಸ್ಯರಿಂದ ಆರಂಭಿಸಿದ ಪ್ರತಿಭಾ ಸ್ತ್ರೀಶಕ್ತಿ ಸಂಘದ ಮೂಲಕ ಸಾಲ ಪಡೆದು ಮನೆಯ ಪಕ್ಕದಲ್ಲೇ ಸ್ವಂತ ಅಂಗಡಿ ತೆರೆದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
ಒಂದೆಡೆ ಪತಿಯ ಅನಾರೋಗ್ಯ ಸಮಸ್ಯೆ, ಇನ್ನೊಂದೆಡೆ ರಸ್ತೆ ಅಪಘಾತದಿಂದ ಒಂದು ಕೈಯನ್ನು ಕಳೆದುಕೊಂಡಿದ್ದ ಶಮೀಮ ಅವರು ಆರ್ಥಿಕವಾಗಿ ಜರ್ಝರಿತಗೊಂಡರೂ ತನ್ನ ಅಂಗಡಿಯಲ್ಲಿ ಬಂದ ಆದಾಯದಲ್ಲೇ ತನ್ನ ಏಳು ಮಕ್ಕಳಿಗೆ ಶಿಕ್ಷಣ ಒದಗಿಸಿದ್ದಾರೆ. ವಿಶೇಷವೆಂದರೆ, ತಮ್ಮ ಮಕ್ಕಳನ್ನು ಇವರು ಕನ್ನಡ ಮಾಧ್ಯಮ ಶಾಲೆಯಲ್ಲಿಯೇ ಓದಿಸಿದ್ದಾರೆ.
‘ಪತಿಯ ಅನಾರೋಗ್ಯ ಸಮಸ್ಯೆಯಿಂದ ಅವರಿಗೆ ಹೊರ ಹೋಗಿ ದುಡಿಯಲು ಸಾಧ್ಯವಾಗುತ್ತಿರಲಿಲ್ಲ. ಈ ನಡುವೆ ಮಕ್ಕಳ ಶಿಕ್ಷಣ ಕುಟುಂಬ ನಿರ್ವಹಣೆಗಾಗಿ ಪರದಾಟದ ಬದುಕು. ಆ ಸಂದರ್ಭ ನನಗೆ ಸಾಥ್ ನೀಡಿದ್ದು ಸಂಘ. ಸಂಘದ ಮೂಲಕ ಸಾಲ ಪಡೆದು ಸ್ವಂತ ಅಂಗಡಿ ಆರಂಭಿಸಿದೆ. ಮುಡಿಪು ಜನ ಶಿಕ್ಷಣ ಟ್ರಸ್ಟ್ ಮೂಲಕ ಟೈಲರಿಂಗ್ ಯಂತ್ರವೂ ಸಿಕ್ಕಿತು. ಕಷ್ಟದ ಸಮಯದಲ್ಲಿ ಟ್ರಸ್ಟ್ ನವರು ಸಹಕರಿಸಿದರು’ ಎನ್ನುವ ಶಮೀಮ ಮುಹಮ್ಮದ್ ರಫೀಕ್, ಮಹಿಳೆಯರು ಕಷ್ಟ ಬಂದಾಗ ಕುಗ್ಗದೆ ಧೈರ್ಯದಿಂದ ಜೀವನ ಸಾಗಿಸಬೇಕು ಎನ್ನುವ ಧೈರ್ಯದ ನುಡಿಗಳನ್ನಾಡುತ್ತಾರೆ.
ಕೃಷಿಯಲ್ಲಿ ಯಶಸ್ವಿಯಾದ ಲತಾ ಸ್ವಚ್ಛ ವಾಹಿನಿಯ ನಿರ್ವಾಹಕಿ!
ಉಳ್ಳಾಲ ತಾಲೂಕಿನ ಬಾಳೆಪುಣಿ ಗ್ರಾಮದ ಲತಾ ಮಾಲಾಜೆ, ತಮ್ಮ ಸ್ವಲ್ಪ ಜಮೀನಿನಲ್ಲೇ ವಿವಿಧ ತರಕಾರಿಗಳನ್ನು ಬೆಳೆಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ಮಂದಾರ ಸಂಜೀವಿನಿ ಒಕ್ಕೂಟ ಸ್ತ್ರೀ ಶಕ್ತಿ ಸಂಘದ ಸದಸ್ಯರಾದ ಲತಾ ಮಾಲಾಜೆ, ತರಕಾರಿ ಬೆಳೆ ಮಾತ್ರವಲ್ಲದೆ ಹೈನುಗಾರಿಕೆ, ನಾಟಿ ಕೋಳಿ ಸಾಕಣೆಯನ್ನೂ ಮಾಡುತ್ತಿದ್ದಾರೆ. ಸಂಘದ ಮೂಲಕ ಉಪ್ಪಿನಕಾಯಿ ತಯಾರಿಸಿ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ.
‘ತರಕಾರಿ ಕೃಷಿಗೆ ಬೇಕಾಗುವಷ್ಟು ಗೊಬ್ಬರ ಹೈನುಗಾರಿಕೆಯಿಂದ ಸಿಗುತ್ತಿದ್ದು, ಹಸುಗಳು ದಿನಕ್ಕೆ 10 ಲೀಟರ್ ಹಾಲು ಕೊಡುತ್ತವೆ ಮತ್ತು ನಾಟಿ ಕೋಳಿ ಮೊಟ್ಟೆಗಳನ್ನು ಮಾರಾಟ ಮಾಡುತ್ತೇನೆ. ಪತಿಯೂ ನನ್ನ ಕೆಲಸದಲ್ಲಿ ಸಹಾಯ ಮಾಡುತ್ತಾರೆ’ ಎನ್ನುತ್ತಾರೆ ಲತಾ ಮಾಲಾಜೆ.
ಕಡು ಬಡತನದಿಂದ ಬೆಳೆದ ಲತಾ ಅವರಿಗೆ ಶಿಕ್ಷಣ ಮರೀಚಿಕೆಯಾಗಿತ್ತು. ಕೃಷಿ ಕ್ಷೇತ್ರದಲ್ಲಿ ತುಂಬಾ ಆಸಕ್ತಿ ಇದ್ದ ಕಾರಣ 20 ವರ್ಷಗಳಿಂದ ಸ್ವಂತ ಜಮೀನಿನಲ್ಲೇ 12 ಬಗೆಯ ತರಕಾರಿಗಳನ್ನು ಬೆಳೆದು ವಿವಿಧ ಸಂತೆಗಳಲ್ಲಿ, ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ತೋಟಕ್ಕಾಗಿನ ತರಕಾರಿ ಬೀಜವನ್ನು ತಾವು ಬೆಳೆದ ತರಕಾರಿಯಿಂದಲೇ ಸಂಗ್ರಹಿಸುವ ಲತಾ, ಅಗತ್ಯವಿರುವವರಿಗೂ ಬೀಜವನ್ನು ಮಾರಾಟ ಮಾಡುತ್ತಾರೆ.
‘ಕೆಲಸ ಯಾವುದೇ ಆಗಿರಲಿ, ಆಸಕ್ತಿ ಮತ್ತು ಛಲ ಇದ್ದರೆ ಕೃಷಿಯಲ್ಲಿ ಯಶಸ್ಸು ಗಳಿಸಬಹುದು’ ಎಂದು ಲತಾ ಮಾಲಾಜೆ ಹೇಳುತ್ತಾರೆ. ಸದ್ಯ ಅವರು ಸ್ವಚ್ಛ ವಾಹಿನಿಯ ನಿರ್ವಾಹಕರಾಗಿ ದುಡಿಯುತ್ತಿದ್ದು ಮನೆ ಮನೆ ಕಸ ಸಂಗ್ರಹಿಸಿ ವಿಲೇವಾರಿ ಮಾಡುತ್ತಿದ್ದಾರೆ. ಈ ಮೂಲಕ ಸ್ವಚ್ಛ ಭಾರತ ಅಭಿಯಾನದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ.
ಮನೆಯಲ್ಲೇ ‘ಹೋಮ್ ಪ್ರಾಡಕ್ಟ್’ ತಯಾರಿಸುವ ಸಾವಿತ್ರಿ
ಮೂಲತ: ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನವರಾದ ಸಾವಿತ್ರಿಯವರು ಮಂಗಳೂರು ಸಮೀಪದ ಮುಡಿಪು ಪೆದಮಲೆ ಬಂಗ್ಲೆರೋಡ್‌ನಲ್ಲಿ ವಾಸವಾಗಿದ್ದು, ಮನೆಯಲ್ಲೇ ‘ಹೋಮ್ ಪ್ರಾಡಕ್ಟ್’ ತಯಾರಿಸಿ ಮಾರಾಟ ಮಾಡುತ್ತಾರೆ. ಪ್ರಕೃತಿ ಸ್ತ್ರೀಶಕ್ತಿ ಸಂಘ(ಈಗ ಸಂಜೀವಿನಿ ಜೊತೆ ಸೇರಿದೆ)ದಿಂದ ಆರಂಭದಲ್ಲಿ 50,000 ರೂ. ಸಾಲ ಪಡೆದು ಮನೆಯಲ್ಲೇ ‘ಹೋಮ್ ಪ್ರಾಡಕ್ಟ್’ ತಯಾರಿಸಿ ಮಾರಾಟ ಮಾಡಿ ತಮ್ಮ ಸ್ವ ಉದ್ಯೋಗದಲ್ಲಿ ಯಶಸ್ಸು ಕಂಡಿದ್ದಾರೆ.
‘ಕೊರೋನ ಕಾಲದಲ್ಲಿ ದೊರೆತ ಅವಕಾಶ ಹೋಮ್ ಪ್ರಾಡಕ್ಟ್ ತಯಾರಿಸಲು ಪ್ರೇರಣೆ ನೀಡಿತು’ ಎನ್ನುತ್ತಾರೆ ಸಾವಿತ್ರಿ ಪ್ರಕಾಶ್.
ಲಾಕ್‌ಡೌನ್ ಸಮಯದಲ್ಲಿ ಮಕ್ಕಳಿಗೆ ಹೊರಗಿನ ತಿಂಡಿ ಸಿಗುತ್ತಿರಲಿಲ್ಲ, ಮನೆಯಲ್ಲೇ ವಿವಿಧ ತಿಂಡಿ ಮಾಡಿಕೊಡುತ್ತಿದ್ದೆ. ಈ ವೇಳೆಯಲ್ಲೇ ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ ಮುಂತಾದ ಖಾದ್ಯಗಳನ್ನು ಮಾಡಲು ಕಲಿತುಕೊಂಡೆ. ಕೊರೋನ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಸೇವೆ ಮಾಡುತ್ತಿದ್ದ ಪತಿ ಪ್ರಕಾಶ್ ಕೆಲಸ ಬಿಟ್ಟರು. ಆಗ ಕುಟುಂಬದ ನಿರ್ವಹಣೆಗಾಗಿ ಮನೆಯಲ್ಲೇ ಸ್ವಂತ ಉದ್ಯೋಗ ಮಾಡಲು ಯೋಜಿಸಿದೆ ಎಂದು ಸಾವಿತ್ರಿ ಪ್ರಕಾಶ್ ಭಟ್ ಹೇಳುತ್ತಾರೆ.
ಈಗ ಮನೆಯಲ್ಲೇ ವಿವಿಧ ಖಾದ್ಯಗಳಾದ ಹಪ್ಪಳ, ಜೋಳದರೊಟ್ಟಿ, ಸಂಬಾರು ಪುಡಿ,ರಸಂ ಪುಡಿ, ತಿಂಡಿಗಳನ್ನು ತಯಾರಿಸಿ ಸಂತೆ, ಜಾತ್ರೆ ಮತ್ತು ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಇವರ ಆಹಾರ ತಯಾರಿಕೆಗೆ ‘ಫುಡ್ ಸರ್ಟಿಫಿಕೇಟ್’ ಕೂಡ ಸಿಕ್ಕಿದೆ.
ಜೋಳದ ರೊಟ್ಟಿಗೆ ಭಾರೀ ಬೇಡಿಕೆ:
‘ನಾವು ಮಾಡುವ ಜೋಳದ ರೊಟ್ಟಿಗೆ ತುಂಬಾ ಬೇಡಿಕೆ ಇದೆ. ಜನರು ಮನೆಗೇ ಬಂದು ತೆಗೆದುಕೊಂಡು ಹೋಗುತ್ತಾರೆ. ಸಂತೆ, ಕಾರ್ಯಕ್ರಮಗಳಲ್ಲಿಯೂ ಮಾರಾಟ ಮಾಡುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಮ್ಮೆ ದೇರಳಕಟ್ಟೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದಾಗ ನಮ್ಮ ಜೋಳದ ರೊಟ್ಟಿಯನ್ನು ಖರೀದಿಸಿದ್ದರು ಮತ್ತು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ರಾಜಕೀಯ ನಾಯಕರಾದ ಅಶ್ವತ್ಥನಾರಾಯಣ, ನಳಿನ್‌ಕುಮಾರ್ ಕಟೀಲು ಅವರು ಕೂಡ ಹೋಮ್ ಪ್ರಾಡಕ್ಟ್ ಅನ್ನು ಖರೀದಿಸಿದ್ದರು’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಸಾವಿತ್ರಿ ಪ್ರಕಾಶ್ ಭಟ್.
ಇವರ ಸಾಧನೆಗೆ ಜಿಲ್ಲಾಮಟ್ಟದ ಪ್ರಶಸ್ತಿ ಮತ್ತು ತಾಲೂಕು ಮಟ್ಟದಲ್ಲಿ ಪ್ರಕೃತಿ ಸ್ತ್ರೀ ಶಕ್ತಿ ಪುರಸ್ಕಾರ ಲಭ್ಯವಾಗಿದೆ.
ಸ್ವಸಹಾಯ ಸಂಘಗಳ ಹುಟ್ಟಿನ ಬಗ್ಗೆ...
1980ರಲ್ಲಿ ಬಡತನ ನಿರ್ಮೂಲನೆಗಾಗಿ ಭಾರತ ಸರಕಾರ ಗಾಮೀಣಾಭಿವೃದ್ಧಿ ಇಲಾಖೆಯ ಮೂಲಕ ಐಆರ್‌ಡಿಪಿ (ಸಮಗ್ರ ಗ್ರಾಮೀಣ ಅಭಿವೃದ್ಧಿ) ಕಾರ್ಯಕ್ರಮವನ್ನು ಅನುಷ್ಠಾನ ಮಾಡಿತು. 1999ರಲ್ಲಿ ಈ ಕಾರ್ಯಕ್ರಮವನ್ನು ಸ್ವರ್ಣ ಜಯಂತಿ ಗ್ರಾಮ ಸ್ವರೋಜ್‌ಗಾರ್ ಯೋಜನಾ ಎಂಬುದಾಗಿ ಮಾರ್ಪಡಿಸಿ, ಸ್ವ ಸಹಾಯ ಸಂಘಗಳ ಬಲವರ್ಧನೆ ಹಾಗೂ ಸಂಘಟಿಸುವ ಮೂಲಕ ಬಡತನ ನಿರ್ಮೂಲನೆಗಾಗಿ ಕಾರ್ಯಕ್ರಮವನ್ನು ಆಯೋಜಿಸಿತು.
ಎಸ್‌ಜಿಎಸ್‌ವೈ, ದ್ವಾಕ್ರಾ ಯೋಜನೆಯನ್ನು ಪ್ರೊ. ರಾಧಾಕೃಷ್ಣ ಸಮಿತಿಯ ಶಿಫಾರಸಿನಿಂದ ಪುನರ್‌ರಚಿಸಿ 3 ಜೂನ್ 2011ರಂದು ರಾಜಸ್ತಾನದ ಬನ್ಸ್ವಾರ ಜಿಲ್ಲೆಯಲ್ಲಿ ಭಾರತ ಸರಕಾರವು ಎನ್‌ಆರ್‌ಎಲ್‌ಎಮ್(ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ) ಅನ್ನು ಘೋಷಿಸಿತು.
ಈ ಯೋಜನೆಯು ರಾಷ್ಟ್ರಮಟ್ಟದಲ್ಲಿ ‘ಅಜೀವಿಕಾ’ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದು, ಕರ್ನಾಟಕ ರಾಜ್ಯದಲ್ಲಿ ‘ಸಂಜೀವಿನಿ’ ಎಂಬ ಹೆಸರಿನಿಂದ ಡಿಸೆಂಬರ್ 2011ರ ನಂತರ ಅನುಷ್ಠಾನಗೊಂಡಿತು. ಈ ಯೋಜನೆ ಕೇರಳದಲ್ಲಿ ‘ಕುಡುಂಬಶ್ರೀ’ ಆಂಧ್ರಪ್ರದೇಶದಲ್ಲಿ ‘ಸರ್ಪ್’, ಬಿಹಾರದಲ್ಲಿ ‘ಜೀವಿಕಾ’, ತಮಿಳುನಾಡಿನಲ್ಲಿ ‘ಪುದುವಾಳು’ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುತ್ತಿದ್ದು ಎಲ್ಲ ರಾಜ್ಯಗಳಲ್ಲೂ ಅನುಷ್ಠಾನಗೊಂಡಿದೆ.
ಈ ಯೋಜನೆ ಅನುಷ್ಠಾನಕ್ಕೆ ರಾಷ್ಟ್ರಮಟ್ಟದಲ್ಲಿ ಎನ್‌ಎಮ್‌ಎಮ್‌ಯು(ನ್ಯಾಷನಲ್ ಮಿಷನ್ ಮ್ಯಾನೇಜ್‌ಮೆಂಟ್ ಯುನಿಟ್), ರಾಜ್ಯದಲ್ಲಿ ಎಸ್‌ಎಮ್‌ಎಮ್‌ಯು,ಜಿಲ್ಲೆಯಲ್ಲಿ ಡಿಎಮ್‌ಎಮ್‌ಯು ಹಾಗೂ ಬ್ಲಾಕ್ ಮಟ್ಟದಲ್ಲಿ ಬಿಎಮ್‌ಎಮ್‌ಯು ಕಾರ್ಯನಿರ್ವಹಿಸುತ್ತದೆ. ಕರ್ನಾಟಕದಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ವ ಸಹಾಯ ಗುಂಪುಗಳ ಒಕ್ಕೂಟಗಳಿವೆ. ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಶೇ.60 ಮತ್ತು ಕರ್ನಾಟಕ ಸರಕಾರದ ಕೌಶಲ್ಯಾಭಿವೃದ್ಧಿ ಜೀವನೋಪಾಯ ಮತ್ತು ಉದ್ಯಮಶೀಲತೆ ಇಲಾಖೆಯ ಶೇ.40 ಅನುದಾನ ನೀಡಲಾಗುತ್ತಿದೆ. ಲಾಭಯುತ ಆದಾಯವನ್ನು ಒದಗಿಸುವುದರ ಮೂಲಕ ಬಡತನದ ತೀವ್ರತೆಯನ್ನು ಕಡಿಮೆಗೊಳಿಸುವುದು ಮತ್ತು ಸಮುದಾಯ ಸಂಸ್ಥೆಗಳ ಮೂಲಕ ಸ್ವ ಉದ್ಯೋಗ ಅವಕಾಶವನ್ನು ಕಲ್ಪಿಸುವುದರಿಂದಾಗಿ ಗ್ರಾಮೀಣ ಜನರ ಜೀವನಮಟ್ಟದಲ್ಲಿ ಅಭಿವೃದ್ಧಿಯನ್ನು ಕಾಣುವುದು ಇದರ ಧ್ಯೇಯವಾಗಿದೆ.
ಗ್ರಾಮೀಣ ಮಹಿಳೆಯರಿಗೆ ಸುಲಭವಾಗಿ ಅತೀ ಸಣ್ಣ ಮೊತ್ತದ ಸಾಲ ಒದಗಿಸುವುದರ ಮೂಲಕ ಸ್ವ ಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತವೆ. ಈ ಸಾಲವು ಮಹಿಳೆಯರಿಗೆ ಅವರ ವ್ಯವಹಾರವನ್ನು ಸುಧಾರಿಸಲು, ಉಪಕರಣ ಮತ್ತು ಉತ್ಪಾದನಾ ಸಾಧನಗಳನ್ನು ಹೊಂದಲು ಸಹಕಾರಿಯಾಗುತ್ತದೆ. ಉಳಿತಾಯ ಮಾಡುವ ಅಭ್ಯಾಸ ರೂಢಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ ಮತ್ತು ಜೀವನೋಪಾಯ ಚಟುವಟಿಕೆಗಳನ್ನು ಪ್ರಾರಂಭಿಸಲು ನಿರ್ದಿಷ್ಟ ಆರ್ಥಿಕ ಉದ್ದೇಶಗಳಿಗಾಗಿ ಗುಂಪು ಸಾಲಗಳು ಲಭ್ಯವಾಗುತ್ತವೆ. ಸಾಕ್ಷರತಾ ಅಭಿಯಾನದ ಸಮಯದಿಂದಲೇ ಜನ ಶಿಕ್ಷಣ ಟ್ರಸ್ಟ್ ನಿಂದ ಸಮುದಾಯ ಆಡಳಿತವಾಗಿ
ಸ್ವಸಹಾಯ ಸಂಘಗಳ ಸದಸ್ಯರಿಗೆ ತರಬೇತಿ, ಬೆಂಬಲ ನೀಡುತ್ತಾ ಬರಲಾಗುತ್ತಿದೆ. ಸ್ವ ಸಹಾಯ ಸಂಘಗಳು ಯಾವುದೇ ಮಧ್ಯವರ್ತಿಗಳಿಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಮಹಿಳೆಯರು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸ್ವ ಸಹಾಯ ಸಂಘಗಳಲ್ಲಿ ಸಾಲ ಪಡೆದು ಸ್ವ ಉದ್ಯೋಗದ ಮೂಲಕ ಸಾಲಮುಕ್ತರಾಗಿ ಸ್ವಾವಲಂಬಿ ಜೀವನ ನಡೆಸಬೇಕು.
ಸೀನ ಶೆಟ್ಟಿ, ನಿರ್ದೇಶಕ,
ಜನ ಶಿಕ್ಷಣ ಟ್ರಸ್ಟ್, ಮುಡಿಪು.