ಕೋವಿಡ್ ಹಗರಣದ ಬೆನ್ನಿಗೇ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮತ್ತೊಂದು ತನಿಖೆ
ಮಾಜಿ ಸಿಎಂ ಕೊರಳಿಗೆ ಸುತ್ತಿಕೊಳ್ಳುತ್ತಾ ಕೆಕೆಆರ್‌ಡಿಬಿ ಹಗರಣ ?
ರಾಜ್ಯದಲ್ಲಿ ಕೋವಿಡ್ ಕಾಲದಲ್ಲಿ ನಡೆದಿರುವ ಹಗರಣದ ಬಗ್ಗೆ ನಡೆಸಲಾದ ತನಿಖೆಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರೋದಲ್ಲದೆ, ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ನೇತೃತ್ವದ ವಿಚಾರಣಾ ಆಯೋಗ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವರಾಗಿದ್ದ ಬಿ ಶ್ರೀರಾಮುಲು ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಶಿಫಾರಸು ಮಾಡಿದೆ.
ಅದರ ಬೆನ್ನಲ್ಲೇ ಇದೀಗ ರಾಜ್ಯ ಸರಕಾರ ಬಿಎಸ್‌ವೈ ಕಾಲದಲ್ಲಿ ನಡೆದಂತಹ ಮತ್ತೊಂದು ಮಹಾ ಹಗರಣದ ತನಿಖೆಗೆ ಮುಂದಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) 300 ಕೋಟಿ ಅನುದಾನ ದುರ್ಬಳಕೆಗೆ ಸಂಬಂಧಿಸಿದಂತೆ ತನಿಖೆಗೆ ರಾಜ್ಯ ಸರಕಾರ ಆದೇಶಿಸಿದ್ದು, ಆ ಮೂಲಕ ಬಿಜೆಪಿ ಸರಕಾರದ ಅವಧಿಯ ಮತ್ತೊಂದು ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಅಕ್ರಮಗಳ ಕುರಿತು ಸಮಗ್ರ ತನಿಖೆಗೆ ನಿವೃತ್ತ ಐಎಎಸ್ ಅಧಿಕಾರಿ ಸುಧೀರ್ ಕುಮಾರ್ ಅವರನ್ನು ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಆರು ತಿಂಗಳ ಒಳಗೆ ತನಿಖೆ ನಡೆಸಿದ ವರದಿ ಸಲ್ಲಿಸಬೇಕು. ತನಿಖೆಗೆ ಅಗತ್ಯ ಇರುವ ಮಾನವ ಸಂಪನ್ಮೂಲ, ಕಚೇರಿ, ವಾಹನ ಇತ್ಯಾದಿ ವ್ಯವಸ್ಥೆಗಳನ್ನು ಕೆಕೆಆರ್‌ಡಿಬಿ ಮತ್ತು ಕಲಬುರಗಿ ಜಿಲ್ಲಾಧಿಕಾರಿ ಒದಗಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಕೆಕೆಆರ್‌ಡಿಬಿ ಮತ್ತು ಕಲ್ಯಾಣ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದಲ್ಲಿ ಅಕ್ರಮಗಳು ನಡೆದಿದೆ ಎಂದು ಬಂದಿದ್ದ ದೂರಿನ ಕುರಿತು ವಿಚಾರಣೆ ನಡೆಸಿದ್ದ, ಅಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ, ಈಗ ನಿವೃತ್ತರಾಗಿರುವ ಇ.ವಿ. ರಮಣ ರೆಡ್ಡಿ ಅವರು ವರದಿ ನೀಡಿದ್ದರೂ. ಆ ವರದಿ ಪರಿಶೀಲಿಸಿ, ಹೆಚ್ಚಿನ ತನಿಖೆ ನಡೆಸಲು ಸುಧೀರ್ ಕುಮಾರ್ ಅವರನ್ನು ನೇಮಿಸಲಾಗಿದೆ.
ಸರಕಾರ 45 ಕೋಟಿಯಲ್ಲಿ 315 ಹೊಸ ಬಸ್ ಖರೀದಿಸಲು ಅನುಮೋದನೆ ನೀಡಿದ್ದರೂ ಆ ಅನುದಾನವನ್ನು ಬೇರೆ ಕಾಮಗಾರಿಗಳಿಗೆ ಬಳಸಿಕೊಂಡಿರುವುದು, 47 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದರೂ 37 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಂಡಳಿಯು ಮಂಜೂರಾತಿ ನೀಡಿರುವುದು, 815 ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಅನುಮೋದನೆ ನೀಡಿದ್ದರೂ ಅನುಷ್ಠಾನಗೊಳಿಸದಿರುವುದೂ ಸೇರಿದಂತೆ ಒಟ್ಟು ಎಂಟು ಆರೋಪಗಳನ್ನು ಮಾಡಲಾಗಿತ್ತು. ನಿಯಮ ಉಲ್ಲಂಘಿಸಿ ಅನುದಾನ ಮಂಜೂರು ಮತ್ತು ದುರ್ಬಳಕೆಯ ಆರೋಪಗಳನ್ನು ಸಂಘದ ಮೇಲೆ ಮಾಡಲಾಗಿತ್ತು. ಈ ಆರೋಪಗಳ ಕುರಿತು ರಮಣ ರೆಡ್ಡಿ ಸರಕಾರಕ್ಕೆ ವರದಿ ಸಲ್ಲಿಸಿದ್ದರೂ.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೆಕೆಆರ್‌ಡಿಬಿ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ ರಚಿಸಲಾಗಿತ್ತು. 2020-21 ರಿಂದ 2022-23ರ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘಕ್ಕೆ ಪ್ರತಿ ವರ್ಷ 100 ಕೋಟಿ ರೂ.ನಂತೆ ಒಟ್ಟು 300 ಕೋಟಿ ರೂ. ಅನುದಾನ ನೀಡಲಾಗಿತ್ತು.
ಕೆಕೆಆರ್‌ಡಿಬಿ ಇರುವಾಗ ಅದರ ಅಡಿ ಸಂಘ ರಚನೆ ಹಾಗೂ ಸಂಘಕ್ಕೆ ನೀಡಿರುವ ಅನುದಾನ ದುರ್ಬಳಕೆ ಕುರಿತಂತೆ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದರೂ. ಜತೆಗೆ ಅಕ್ರಮದ ಕುರಿತು ತನಿಖೆ ನಡೆಸುವಂತೆಯೂ ಆಗ್ರಹ ಕೇಳಿ ಬಂದಿತ್ತು.
ಇದೀಗ ರಾಜ್ಯ ಸರಕಾರದ ಆದೇಶದಂತೆ 2020-21ರಿಂದ 2022-23ರವರೆಗೆ ಕೆಕೆಆರ್‌ಡಿಬಿಗೆ ಸರಕಾರದಿಂದ ಬಿಡುಗಡೆ ಮಾಡಲಾದ ಅನುದಾನ ಮತ್ತು ಅದರ ವಿನಿಯೋಗದ ಬಗ್ಗೆ ಪರಿಶೀಲಿಸಬೇಕು. ಆ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘಕ್ಕೆ ಬಿಡುಗಡೆ ಮಾಡಿರುವ 300 ಕೋಟಿ ರೂ. ವೆಚ್ಚ ಮಾಡುವಲ್ಲಿ ಅಕ್ರಮ ನಡೆದಿದೆ ಎಂಬ ಬಗ್ಗೆ ಹಾಗೂ ಕೆಕೆಆರ್‌ಡಿಬಿ ಅನುದಾನದಲ್ಲಿ ಕೋವಿಡ್ ಅವಧಿಯಲ್ಲಿ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿನ ಅಕ್ರಮ ಬಗ್ಗೆ ಪರಿಶೀಲಿಸಲು ಸೂಚಿಸಲಾಗಿದೆ.
ಕೋವಿಡ್ ಅವಧಿಯಲ್ಲಿ ಮೃತಪಟ್ಟ ಖಾಸಗಿ ಶಾಲಾ ಶಿಕ್ಷಕರ ಕುಟುಂಬದವರಿಗೆ ಸರಕಾರದ ಅನುಮೋದನೆ ಇಲ್ಲದೇ 50 ಸಾವಿರ ರೂ. ಪರಿಹಾರ ನೀಡಿರುವುದು, ಕೆಕೆಆರ್‌ಡಿಬಿ ಅಧಿಕಾರ ಮೀರಿ ದೇಶಿಹಸುಗಳ ಸಾಕಣೆಗೆ 327.40 ಕೋಟಿ ರೂ. ಪ್ರೋತ್ಸಾಹಧನ ನೀಡಿರುವುದು, ಕಲ್ಯಾಣ ಕರ್ನಾಟಕ ವ್ಯಾಪ್ತಿಯ 6 ಜಿಲ್ಲೆಗಳಲ್ಲಿ 310.59 ಕೋಟಿ ರೂ. ವೆಚ್ಚದಲ್ಲಿ 1 ಕೋಟಿ ಸಸಿ ನೆಟ್ಟಿರುವ ಕುರಿತು ಹಾಗೂ ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಆಚರಣೆಗಾಗಿ ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿ ಬಿಡುಗಡೆಯಾದ ಮೊತ್ತಕ್ಕಿಂತ ಹೆಚ್ಚುವರಿಯಾಗಿ 50 ಲಕ್ಷ ರೂ. ವೆಚ್ಚ ಮಾಡಿರುವ ಬಗ್ಗೆ ಪರಿಶೀಲಿಸುವಂತೆ ತನಿಖಾ ಸಮಿತಿಗೆ ತಿಳಿಸಲಾಗಿದೆ
ಯಡಿಯೂರಪ್ಪ ಸಿಎಂ ಆಗಿದ್ದಾಗ ಕೋವಿಡ್ ಸಮಯದಲ್ಲಿ ಪಿಪಿಇ ಕಿಟ್ ಖರೀದಿಯಲ್ಲಿ ಅಕ್ರಮ ನಡೆದಿದ್ದು, ತನಿಖಾ ಆಯೋಗವು ಸೆಪ್ಟೆಂಬರ್ ಮೊದಲ ವಾರದಲ್ಲೇ ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿತ್ತು.
ವರದಿಯಲ್ಲಿ ಕೋವಿಡ್ ಹಗರಣ ನಡೆದಿರುವುದು ಖಚಿತವೆಂದು ಆಯೋಗ ದೃಢಪಡಿಸಿತ್ತು. ಚೀನಾದ ಎರಡು ಕಂಪನಿಗಳಿಂದ ಪ್ರತಿ ಕಿಟ್ 2,117.53 ರೂ.ನಂತೆ 3 ಲಕ್ಷ ಪಿಪಿಇ ಕಿಟ್ ಖರೀದಿಗೆ ಯಡಿಯೂರಪ್ಪ ಅನುಮೋದನೆ ನೀಡಿದ್ದರೂ. ಅವರ ಆದೇಶದ ಮೇರೆಗೆ ಕಿಟ್‌ಗಳನ್ನು ಖರೀದಿಸಲಾಗಿದೆ. ಆದರೆ, ಖರೀದಿ ಪ್ರಕ್ರಿಯೆಯು ಪಾರದರ್ಶಕವಾಗಿಲ್ಲ. ವಂಚನೆ ಮತ್ತು ಭ್ರಷ್ಟಾಚಾರದಿಂದ ಕೂಡಿದೆ. ಇದರಲ್ಲಿ ಅಂದಿನ ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರ ಪಾತ್ರವಿದೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.
ಅದರ ಬೆನ್ನಲ್ಲೇ ಮತ್ತೊಂದು ಹಗರಣ ಬಿಎಸ್ ವೈ ಗೆ ಕಂಟಕವಾಗುವ ಸಾಧ್ಯತೆ ಇದೆ.