ನಾವು ನಮ್ಮ ಧರ್ಮ ಅನುಸರಿಸಿ, ಅನ್ಯ ಧರ್ಮವನ್ನು ಗೌರವಿಸಬೇಕು : ಸಿಎಂ ಸಿದ್ದರಾಮಯ್ಯ
ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಸಂಘಟನೆಯ ನೂರರ ಸಂಭ್ರಮ
Photo : x/@CMofKarnataka
ಬೆಂಗಳೂರು :ನಾವು ನಮ್ಮ ಧರ್ಮ ಅನುಸರಿಸಿ, ಅನ್ಯ ಧರ್ಮವನ್ನು ಗೌರವಿಸಬೇಕು. ಕುವೆಂಪು ಹೇಳುವಂತೆ ನಮ್ಮ ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗಿರಬೇಕು. ಯಾವುದೇ ಧರ್ಮ ಇದ್ದರೂ ಎಲ್ಲರೂ ಸೌಹಾರ್ದತೆಯಿಂದ ಬದುಕಿದರೆ ಮಾತ್ರ ಶಾಂತಿ ನೆಲೆಸಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಅರಮನೆ ಮೈದಾನ(ಶಂಸುಲ್ ಉಲಮಾ ನಗರ)ದಲ್ಲಿ ರವಿವಾರ ಆಯೋಜಿಸಿದ್ದ ಸಮಸ್ತ ಕೇರಳ ಜಮೀಯ್ಯತುಲ್ ಉಲೆಮಾ ಸಂಘಟನೆಯ ನೂರನೇ ವರ್ಷಚಾರಣೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಸಂಘಟನೆಯು ನೂರನೆ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಲು ಸಂತೋಷವಾಗುತ್ತದೆ. ಯಾವುದೇ ಒಂದು ಸಂಸ್ಥೆ ಅಥವಾ ಸಂಘಟನೆ 100 ವರ್ಷ ಪೂರೈಸಿರುವುದು ಒಂದು ಮೈಲಿಗಲ್ಲು. ಇಂತಹ ನೂರನೆ ವರ್ಷದ ಆಚರಣೆ ಮಾಡುವಾಗ ನಾವು ಬಂದಿರುವ ಹಾದಿ ನೋಡಬೇಕು. ಮುಂದಿನ ಗುರಿ ನೋಡಿ, ಅದನ್ನು ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
Photo : x/@CMofKarnataka
ಇಸ್ಲಾಂ ಧರ್ಮ ಬಹಳ ಹಳೆಯ ಧರ್ಮ. ನೀವು ಇಸ್ಲಾಂ ಆಚರಣೆ ಮಾಡುತ್ತೀರಿ, ನಾನು ಹಿಂದೂ ಧರ್ಮ ಆಚರಣೆ ಮಾಡುತ್ತೇನೆ. ಎಲ್ಲಾ ಧರ್ಮಗಳನ್ನು ಸಮಾನ ಗೌರವದಿಂದ ಕಾಣಬೇಕು ಎಂದು ಸಂವಿಧಾನ ಹೇಳುತ್ತದೆ. ನಾವು ಮನುಷ್ಯರಾಗಿ ಸೌಹಾರ್ದ ಭಾವನೆ ಮೂಡಿಸಬೇಕು. ಇಸ್ಲಾಂ ಶಾಂತಿ ಸಹನೆ ಬೋಧಿಸುತ್ತದೆ. ಸಂವಿಧಾನ ಸಹಿಷ್ಣುತೆ ಹಾಗೂ ಸಹಬಾಳ್ವೆ ಬೋಧಿಸುತ್ತದೆ ಎಂದು ಅವರು ಹೇಳಿದರು.
Photo : x/@CMofKarnataka
ಪ್ರತಿಯೊಬ್ಬರಿಗೂ ಶಿಕ್ಷಣ ಬೇಕು. ಸಂವಿಧಾನದಲ್ಲಿ ಉಚಿತ ಶಿಕ್ಷಣ ಕಡ್ಡಾಯವಾಗಿ ನೀಡಬೇಕು ಎಂದು ಹೇಳಿದೆ. ಸಮಸ್ತ ಸಂಘಟನೆಯು ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ಮುಸ್ಲಿಮ್ ಸಮಾಜ ಶಿಕ್ಷಣ ಪಡೆದರೆ ಸ್ವಾಭಿಮಾನದಿಂದ ಬದುಕುವ ಶಕ್ತಿ ಬರುತ್ತದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಸಮಾಜಕ್ಕೆ ಭವಿಷ್ಯದಲ್ಲಿ ಶಕ್ತಿ ತುಂಬುವ ಕಾರ್ಯಕ್ರಮ : ಯು.ಟಿ.ಖಾದರ್
“ಸೌಹಾರ್ದತೆಯ ಸಮಾಜ, ಅಭಿವೃದ್ಧಿ ಯುತ ಕರ್ನಾಟಕ ಹಾಗೂ ಬಲಿಷ್ಠವಾದ ಭಾರತ ನಮ್ಮ ಸಂಕಲ್ಪ ಆಗಬೇಕು. ಪ್ರತಿಯೊಂದು ಗ್ರಾಮದಲ್ಲಿಯೂ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಉಲಮಾಗಳು ಕೆಲಸ ಮಾಡಿದ್ದಾರೆ. ನಾವೆಲ್ಲ ಸೌಹಾರ್ದ ಸಮಾಜದಲ್ಲಿ ಇರಲು ಸಂವಿಧಾನವನ್ನು ಉಳಿಸಿಕೊಂಡು ಹೋಗಬೇಕು. ಆ ನಿಟ್ಟಿನಲ್ಲಿ ನಮ್ಮ ಉಲಮಾಗಳು ಮಾರ್ಗದರ್ಶನ ಮಾಡಬೇಕು. ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಸಂಘಟನೆ ನಮ್ಮ ರಾಜ್ಯದಲ್ಲಿಯೂ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಲು ನಡೆಸುತ್ತಿರುವ ಪ್ರಯತ್ನಗಳಿಗೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಬೆಂಬಲ ನೀಡಲಿದೆ ಎಂದು ವಿಶ್ವಾಸವಿದೆ. ದುಷ್ಚಟ ಹಾಗೂ ದ್ವೇಷ ಮುಕ್ತ ಸಮಾಜ ನಿರ್ಮಾಣವಾಗಲಿ ಎಂಬುದು ನಮ್ಮ ಬಯಕೆ” ಎಂದು ಸ್ಪೀಕರ್ ಯು ಟಿ ಖಾದರ್ ಹೇಳಿದ್ದಾರೆ.