ಮುಂಬೈ ಇಂಡಿಯನ್ಸ್ 5ನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?
photo: X/hardikpandya7/media
ಜೈಪುರ: ಪ್ರಸಕ್ತ ಐಪಿಎಲ್ ಋತುವಿನಲ್ಲಿ ಐದನೇ ಸೋಲು ಕಂಡ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಈ ಸೋಲಿನ ಹಿನ್ನೆಲೆಯಲ್ಲಿ ತಕ್ಷಣಕ್ಕೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಂದೀಪ್ ಶರ್ಮಾ ಅವರ ಅದ್ಭುತ ಬೌಲಿಂಗ್ (4-0-18-5) ಬಳಿಕ ಯಶಸ್ವಿ ಜೈಸ್ವಾಲ್ ಅವರ ಅಮೋಘ ಶತಕ (61 ಎಸೆತಗಳಲ್ಲಿ 104)ದ ನೆರವಿನಿಂದ ಸವಾಯಿ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಅತಿಥೇಯ ತಂಡ ಎದುರಾಳಿಗಳನ್ನು 9 ವಿಕೆಟ್ ಗಳಿಂದ ಬಗ್ಗುಬಡಿಯಿತು. ರಾಜಸ್ಥಾನ ರಾಯಲ್ಸ್ ಏಳನೇ ಜಯದೊಂದಿಗೆ ತಮ್ಮ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡರೆ, ಐದನೇ ಸೋಲು ಮುಂಬೈ ಇಂಡಿಯನ್ಸ್ ತಂಡವನ್ನು ಕಂಗೆಡಿಸಿದೆ.
"ಎದುರಾಳಿಗಳು ನಮಗಿಂತ ಉತ್ತಮ ಪ್ರದರ್ಶನ ನೀಡಿದರು" ಎಂದು ಒತ್ತಡದಲ್ಲಿದ್ದ ಪಾಂಡ್ಯ ಒಪ್ಪಿಕೊಂಡರು. "ನಾವು ಆರಂಭದಲ್ಲೇ ತೊಂದರೆ ತಂದುಕೊಂಡೆವು. ಆದರೆ ತಿಲಕ್ ವರ್ಮಾ ಮತ್ತು ನೇಹಲ್ ಅದ್ಭುತ ಕೌಶಲ ಪ್ರದರ್ಶಿಸಿದರು. ಆದರೂ ಅಂತಿಮವಾಗಿ ನಾವು 10-15 ರನ್ ಗಳ ಕೊರತೆ ಅನುಭವಿಸಿದೆವು. ಬೌಲಿಂಗ್ ನಲ್ಲಿ ನಾವು ಸ್ಟಂಪ್ಸ್ ಒಳಗೆಯೇ ಕೇಂದ್ರೀಕರಿಸಬೇಕು. ಪವರ್ ಪ್ಲೇ ಆರಂಭದಲ್ಲಿ ನಾವು ಬ್ಯಾಟ್ಸ್ ಮನ್ ಗಳಿಗೆ ಹೊಡೆತಕ್ಕೆ ಅವಕಾಶ ನೀಡಿದೆವು. ಫೀಲ್ಡಿಂಗ್ ನಲ್ಲೂ ಪ್ರದರ್ಶನ ಉತ್ತಮವಾಗಿರಲಿಲ್ಲ. ಒಟ್ಟಾರೆಯಾಗಿ ಎದುರಾಳಿಗಳು ನಮಗಿಂತ ಉತ್ತಮ ಪ್ರದರ್ಶನ ನೀಡಿದರು" ಎಂದು ಬಹುಮಾನ ವಿತರಣಾ ಸಮಾರಂಭದಲ್ಲಿ ಹೇಳಿದರು.
"ಪಂದ್ಯದ ಬಳಿಕ ಆಟಗಾರರನ್ನು ವಿಚಾರಿಸುವುದು ಸೂಕ್ತವಲ್ಲ. ಪ್ರತಿಯೊಬ್ಬರೂ ವೃತ್ತಿಪರರು. ಅವರ ಜವಾಬ್ದಾರಿಯ ಅರಿವು ಅವರಿಗಿದೆ. ನಾವು ಮಾಡಬಹುದಾದದ್ದು ಎಂದರೆ ಪಂದ್ಯದಿಂದ ಕಲಿಯುವುದು. ನಮ್ಮ ತಪ್ಪುಗಳನ್ನು ಕಂಡುಕೊಂಡು ತಿದ್ದಿಕೊಳ್ಳುವುದು" ಎಂದು ಹೇಳಿದರು. ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆಟಗಾರರು ಕನಿಷ್ಠ ಮೂರು ಕ್ಯಾಚ್ ಗಳನ್ನು ಕೈಚೆಲ್ಲಿದ್ದರು.