ಸಂಸದರು ಪ್ರಧಾನಿ ಬಳಿ ಮಲೆನಾಡು ರೈತರ ನಿಯೋಗ ಕೊಂಡೊಯ್ಯಬಾರದೇಕೆ?
ಮಲೆನಾಡಿನ ಅರಣ್ಯ ಭೂಮಿ ಸಮಸ್ಯೆ
ಶಿವಮೊಗ್ಗ: ಶರಾವತಿ ಹಾಗೂ ಚಕ್ರಾ-ಸಾವೆಹಕ್ಲು ಮುಳುಗಡೆ ಸಂತ್ರಸ್ತರ ಪುನರ್ವಸತಿ,ಮಲೆನಾಡಿನ ಅರಣ್ಯ ಭೂಮಿ, ಬಗರ್ ಹುಕುಂ ಸಮಸ್ಯೆಗಳ ಚೆಂಡು ಈಗ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿರುವ ಸಂಸದ ಬಿ.ವೈ. ರಾಘವೇಂದ್ರ ಅಂಗಳಕ್ಕೆ ಬಿದ್ದಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿರುವ ಸಂಸದ ರಾಘವೇಂದ್ರ ಜಿಲ್ಲೆಯ ಪ್ರಭಾವಿ ರಾಜಕಾರಣಿ. ಹಲವು ದಶಕಗಳಿಂದ ಮಲೆನಾಡಿನಲ್ಲಿ ಅರಣ್ಯ ಇಲಾಖೆ ಮತ್ತು ರೈತರ ನಡುವೆ ಸಂಘರ್ಷ ನಡೆಯುತ್ತಿದೆ.ಒತ್ತುವರಿ ತೆರವು,ದಾಖಲೆಗಳ ಜಟಾಪಟಿ ನಡೆಯುತ್ತಿದೆ.ಅರಣ್ಯ ಇಲಾಖೆ ಕೇಂದ್ರದ ಅಧೀನದಲ್ಲಿರುವ ಇಲಾಖೆಗಳಲ್ಲಿ ಒಂದಾಗಿದೆ.ಹೀಗಾಗಿ ಮಲೆನಾಡಿನ ಭೂಮಿ ಹಕ್ಕಿನ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸಲು ಕೇಂದ್ರ ಸರಕಾರದಿಂದ ಮಾತ್ರ ಸಾಧ್ಯವಿದೆ.ಕೇಂದ್ರದ ಮೇಲೆ ಒತ್ತಡ ಹೇರಬೇಕಾದ ಹೊಣೆಗಾರಿಕೆ ಮಲೆನಾಡನ್ನು ಪ್ರತಿನಿಧಿಸುವ ಸಂಸದರ ಮೇಲಿದೆ.
ನಿಯೋಗ ಕೊಂಡೊಯ್ಯಬಾರದೇಕೆ?:
1952 ಮತ್ತು 1957 ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಕೆ.ಜಿ. ಒಡೆಯರ್ ಅವರು, ಲಿಂಗನಮಕ್ಕಿ ಅಣೆಕಟ್ಟಿನಿಂದ ಸಂತ್ರಸ್ತರಾಗಿದ್ದವರ ಪರವಾಗಿ ಅವರಿಗೆ ನ್ಯಾಯ ಕೊಡಿಸಲು ಆ ಭಾಗದ ರೈತ ಮುಖಂಡರನ್ನು ಕರೆದುಕೊಂಡು ಪ್ರಧಾನಮಂತ್ರಿ ಜವಾಹರ ಲಾಲ್ ನೆಹರೂ ಅವರನ್ನು ಭೇಟಿ ಮಾಡಿದ್ದರು.
ಪ್ರಭಾವಿ ರಾಜಕಾರಣಿ,ಪ್ರಧಾನಿಯಾಗಿದ್ದ ಜವಾಹರ ಲಾಲ್ ನೆಹರೂ ಅವರನ್ನು ಭೇಟಿ ಮಾಡುವುದು ಕಷ್ಟ ಸಾಧ್ಯವಾಗಿತ್ತು ಮತ್ತು ಆ ಕಾಲದ ಅವತ್ತಿನ ಸಾರಿಗೆ ಸಂಪರ್ಕಗಳ ಕೊರತೆಯ ನಡುವೆಯೂ ತನ್ನ ಜನ ಪ್ರತಿನಿಧಿ ಜವಾಬ್ದಾರಿಯನ್ನ ಪೂರೈಸಿದ ಮಲೆನಾಡಿನ ಏಕೈಕ ಸಂಸದ ಕೆ.ಜಿ. ಒಡೆಯರ್ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಹೀಗಾಗಿ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರಾಗಿರುವ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ, ಹಾಲಿ ಶಿಕಾರಿಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಬಿ.ವೈ. ವಿಜಯೇಂದ್ರ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಅವರು,13 ಜಿಲ್ಲೆ ವ್ಯಾಪ್ತಿಯ 65 ವಿಧಾನ ಸಭಾ ಕ್ಷೇತ್ರದ ಅರಣ್ಯ ಭೂಮಿ ಸಮಸ್ಯೆಗಳನ್ನು ಪ್ರಧಾನ ಮಂತ್ರಿಯವರ ಮೂಲಕ ಪರಿಹರಿಸಬಾರದೇಕೆ? ಅಷ್ಟಕ್ಕೂ ಇದು ಕೇಂದ್ರ ಸರಕಾರದಿಂದಲೇ ಪರಿಹಾರ ಕಾಣಬೇಕಾದ ಸಮಸ್ಯೆ ಆಗಿದೆ. ಆದ್ದರಿಂದ ಕೆ.ಜಿ.ಒಡೆಯರ್, ಪ್ರಧಾನಮಂತ್ರಿ ನೆಹರೂರವರಿಗೆ ಮಲೆನಾಡು ರೈತರ ನಿಯೋಗವನ್ನು ಭೇಟಿ ಮಾಡಿಸಿದಂತೆ, ಮಲೆನಾಡು ರೈತರ ಪರ ಹೋರಾಡುತ್ತಿರುವ ರೈತ ಮುಖಂಡರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿಸಿ ಮುಖಾಮುಖಿ ಚರ್ಚೆ ನಡೆಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
ಮಲೆನಾಡು ಭಾಗದ ಅರಣ್ಯ ಭೂಮಿ ಸಮಸ್ಯೆಗಳನ್ನು ಪ್ರಧಾನ ಮಂತ್ರಿಯವರ ಗಮನಕ್ಕೆ ತಂದು ಈಶಾನ್ಯ ಭಾರತದ ಕೆಲವು ಕಾನೂನುಗಳನ್ನು, ವಿನಾಯಿತಿಗಳನ್ನು ಮಲೆನಾಡಿಗೂ ವಿಸ್ತರಿಸುವಂತಾಗಲಿ ಮತ್ತು ಇಲ್ಲಿನ ಅರಣ್ಯ ಭೂಮಿ ಸಮಸ್ಯೆ -ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಲು ಪ್ರಧಾನಮಂತ್ರಿಯವರ ಮೂಲಕ ಪ್ರಯತ್ನಿಸಲಿ ಎಂಬ ಹಕ್ಕೊತ್ತಾಯವನ್ನು ರೈತ ಮುಖಂಡರು ಮಾಡುತ್ತಿದ್ದಾರೆ.
ಜನರು ಬದುಕಬೇಕು-ಕಾಡು ಉಳಿಸಬೇಕು:
ಜಲವಿದ್ಯುತ್ ಯೋಜನೆಗಳಿಗಾಗಿ ತಮ್ಮ ಮನೆ,ತೋಟ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡ ಸಂತ್ರಸ್ತರು ಇಂದಿಗೂ ಭೂ ಒಡೆತನಕ್ಕಾಗಿ ಆರು ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ.ಒಂದು ಕಡೆ ಬಿಗಿಯಾದ ಅರಣ್ಯ ಕಾಯ್ದೆಗಳು ಮತ್ತೊಂದೆಡೆ ವಿವಿಧ ರಾಜಕೀಯ ಪಕ್ಷಗಳ ಮತ ಬ್ಯಾಂಕ್ ರಾಜಕಾರಣ ಶರಾವತಿ ಮುಳುಗಡೆ ಸಂತ್ರಸ್ತರು ಭೂ ವಂಚಿತರಾಗುತ್ತಿದ್ದಾರೆ ಎಂದರೆ ತಪ್ಪಾಗಲಾರದು.
ಸರಕಾರಿ ಪ್ರಾಯೋಜಿತ ಯೋಜನೆಗಳಿಂದ ಮುಳುಗಡೆಯಾದ ಸಂತ್ರಸ್ತರಿಗೆ ಸರಕಾರ ಮಂಜೂರು ಮಾಡಿದ್ದ ಭೂಮಿ ಇಂದು ಅರಣ್ಯವಾಗಿದೆ. ಹೆಚ್ಚುವರಿ ಸಾಗುವಳಿಯನ್ನು ಕೇಳುವವರೇ ಇಲ್ಲವಾಗಿದೆ.ಅರಣ್ಯ ಇಲಾಖೆ ಇಂಡೀಕರಣ ಪ್ರಕ್ರಿಯೆಯಿಂದ ಹಿಂದಿದ್ದ ಕಂದಾಯ ಭೂಮಿ ಅರಣ್ಯ ಎಂದು ನಮೂದಾಗಿದೆ. ಇದರಿಂದ ಸಾಗುವಳಿದಾರರು ಕಾನೂನಿನ ಕುಣಿಕೆಗೆ ಒಳಗಾಗಿದ್ದಾರೆ.
ಪಶ್ಚಿಮ ಘಟ್ಟ ಶ್ರೇಣಿ ಉಳಿಸುವ ಜೊತೆಗೆ ಅಲ್ಲಿ ಇರುವ ವನ್ಯಜೀವಿಗಳ ಸಂರಕ್ಷಣೆಯೂ ಆಗಬೇಕು. ಅದರಂತೆ ಪಶ್ಚಿಮ ಘಟ್ಟದಲ್ಲಿ ಸಾವಿರಾರು ವರ್ಷಗಳಿಂದ ನೆಲೆಸಿದ ಜನಸಾಮಾನ್ಯರು ಕೂಡ ಬದುಕಬೇಕಾಗಿದೆ. ಇದಕ್ಕಾಗಿ ಕೇಂದ್ರ ಸರಕಾರ ಸರಿಯಾದ ಸೂತ್ರವನ್ನು ಜಾರಿ ಮಾಡಬೇಕಾಗಿದೆ.ಹೀಗಾಗಿ ಸಂಸದರು ದೃಢ ಹೆಜ್ಜೆಯನ್ನಿಡಬೇಕಿದೆ ಎಂದು ಜನರು ಆಗ್ರಹಿಸುತ್ತಿದ್ದಾರೆ.
ಶರಾವತಿಗೆ ಯಾಕಿಲ್ಲ ಅನುಮತಿ:
ಶಿವಮೊಗ್ಗ ಜಿಲ್ಲೆ ಜೋಗ ಜಲಪಾತದ ಬಳಿ ಅರಣ್ಯ ಭೂಮಿಯಲ್ಲಿ ಪಂಚತಾರಾ ಹೋಟೆಲ್ ಮತ್ತು ರೋಪ್ ವೇ ನಿರ್ಮಿಸಲು ಅರಣ್ಯ ಇಲಾಖೆ ಕೊನೆಗೂ ಅನುಮೋದನೆ ನೀಡಿದೆ.ಆದರೆ ಮುಳುಗಡೆ ರೈತರ ವಿಚಾರದಲ್ಲಿ ಯಾಕೆ ಅನುಮತಿ ನೀಡುತ್ತಿಲ್ಲ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ಪಂಚತಾರಾ ಹೋಟೆಲ್ ಮತ್ತು ರೋಪ್‌ವೇ ನಿರ್ಮಿಸುವುದರ ಪರವಾಗಿ ಸಾಗರ ಮತ್ತು ಶಿರಸಿ ಡಿಸಿಎಫ್‌ಗಳು ವರದಿ ನೀಡಿದ್ದಾರೆ. ಸಾಗರ ರಕ್ಷಿತ ಅರಣ್ಯ ಪ್ರದೇಶದ ತಳಕಳಲೆ ಮತ್ತು ಶಿರಸಿ ರಕ್ಷಿತ ಅರಣ್ಯ ಪ್ರದೇಶದ ಕೋಡ್ಕಣಿ ಪ್ರದೇಶದಲ್ಲಿ ಹೋಟೆಲ್ ಮತ್ತು ರೋಪ್‌ವೇ ನಿರ್ಮಾಣಕ್ಕೆ ಯಾವುದೇ ಸಮಸ್ಯೆ ಇಲ್ಲ. ಅರಣ್ಯ, ವನ್ಯಜೀವಿ ಸಂಪತ್ತಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗುವುದಿಲ್ಲ. ಹೆಚ್ಚು ಮರಗಳ ಹನನವೂ ಆಗುವುದಿಲ್ಲ ಎಂದು ಈ ವರದಿ ಹೇಳಿದೆ.
ವರದಿಯ ಅನುಸಾರ ಕೇಂದ್ರ ಸರಕಾರ ಅನುಮತಿ ನೀಡುವುದಾದರೆ ನಾಡಿಗೆ ಬೆಳಕು ಕೊಟ್ಟ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಂಚಿಕೆ ಮಾಡಲು ಕೇಂದ್ರ ಸರಕಾರ ಅನುಮತಿ ಯಾಕೆ ನೀಡುತ್ತಿಲ್ಲ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.
ಕೈ ಸುಟ್ಟುಕೊಂಡ ಸರಕಾರ:
ಅರಣ್ಯ ಭೂಮಿ ಸಮಸ್ಯೆ-ಕಸ್ತೂರಿ ರಂಗನ್ ವರದಿ - ಇಂಡೀಕರಣ ಇತ್ಯಾದಿ ಸಮಸ್ಯೆಗಳನ್ನು ಎಲ್ಲ ಪಕ್ಷಗಳ ಅಧಿಕಾರಾವಧಿಯಲ್ಲೂ ಸರಿಯಾಗಿ ನಿಭಾಯಿಸಿಲ್ಲ. ಸರ್ವೋಚ್ಚ ನ್ಯಾಯಾಲಯದಲ್ಲಿ ರೈತರನ್ನು ಅವರು ಸಾಗುವಳಿ ಮಾಡುತ್ತಿರುವ ಕೃಷಿ ಭೂಮಿಯಿಂದ ಹಂತ ಹಂತವಾಗಿ ತೆರವು ಮಾಡುವುದಾಗಿ ಅಫಿಡವಿಟ್ ಸಲ್ಲಿಸಿ ತನ್ನ ಕೈ ತಾನೇ ಕಟ್ಟಿಸಿಕೊಂಡಿದೆ.
ರಾಜ್ಯ ಸರಕಾರ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಂತೆ ನಡೆದುಕೊಳ್ಳಬೇಕು. ತಪ್ಪಿದರೆ ನ್ಯಾಯಾಂಗ ನಿಂದನೆ ತೂಗುಕತ್ತಿ. ಇದನ್ನೇ ಪರಿಸರವಾದಿಗಳು ಬಳಸಿಕೊಂಡು ನ್ಯಾಯಾಲಯಗಳಲ್ಲಿ ರಾಜ್ಯ ಸರಕಾರದ ನಿಷ್ಕ್ರಿಯತೆ ಮತ್ತು ನ್ಯಾಯಾಂಗ ನಿಂದನೆ ಎತ್ತಿ ತೋರಿಸುತ್ತಾ ಒತ್ತುವರಿ ತೆರವಿಗೆ ಒತ್ತಾಯಿಸುತ್ತಿದ್ದಾರೆ.
ಕೇಂದ್ರ ಸರಕಾರ ಈಗ ಮಧ್ಯ ಪ್ರವೇಶ ಮಾಡಿ ಈ ಮಲೆನಾಡಿನ ಜ್ವಲಂತ ಸಮಸ್ಯೆ ಬಗೆಹರಿಸಬಹುದಾಗಿದೆ. ಮಲೆನಾಡು ರೈತರ ಪ್ರತಿಭಟನೆಗೆ ಬಂದು ಬೆಂಬಲಿಸಿ ಹೋಗುವ ಮಲೆನಾಡಿನ ಸಂಸದ ಬಿ. ವೈ. ರಾಘವೇಂದ್ರ ಮಲೆನಾಡ ರೈತ ಮುಖಂಡರ ನಿಯೋಗವನ್ನು ಪ್ರಧಾನಮಂತ್ರಿಯವರ ಬಳಿ ಕರೆದೊಯ್ಯುವ ಮೂಲಕ ಮಲೆನಾಡಿನ ಅರಣ್ಯ ಭೂಮಿ ಸಮಸ್ಯೆಗೆ ಇತಿಶ್ರೀ ಹಾಡಬೇಕಿದೆ ಎಂದು ರೈತರು ಒತ್ತಾಯಿಸುತ್ತಿದ್ದಾರೆ.