ಎ. 01 ರಿಂದ 06 ರವರೆಗೆ ಕಾಲುವೆಗೆ ನೀರು ಹರಿಸಲು ನಿರ್ಧಾರ: ಶಾಸಕ ರಾಜಾ ವೇಣುಗೋಪಾಲ ನಾಯಕ

ಸುರಪುರ: ರೈತರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ. ಎಪ್ರಿಲ್ 6ರವರೆಗೆ ನಾರಾಯಣಪುರ ಎಡದಂಡೆ ಕಾಲುವೆಗೆ ನೀರು ಬರಲಿವೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ತಿಳಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು. ಈ ಬಾರಿ ಹಿಂಗಾರು ಹಂಗಾಮಿನಲ್ಲಿ ಹಲವು ಕಾರಣಗಳಿಂದ ನಾರಾಯಣಪುರ ಎಡವ ದಂಡೆ ಕಾಲುವೆಯ ಅಚ್ಚುಕಟ್ಟು ಪ್ರದೇಶದ ರೈತರು ತಡವಾಗಿ ನಾಟಿ ಕಾರ್ಯ ಮಾಡಿದ್ದು. ಹೀಗಾಗಿ ಫಸಲು ಬರುವ ಸಮಯದಲ್ಲಿ ರೈತರಿಗೆ ನೀರಿನ ಕೊರತೆಯಾಗುವ ಆತಂಕ ಎದುರಾಗಿತ್ತು. ಸದ್ಯದ ಪರಸ್ಥಿತಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ , ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರಾದ ಆರ್.ಬಿ.ತಿಮ್ಮಾಪುರ ರವರ ಗಮನಕ್ಕೆ ತಂದಿರುವೆ. ತಕ್ಷಣವೇ ನಮ್ಮ ಮನವಿಗೆ ಸ್ಪಂದಿಸಿ ರೈತರಿಗೆ ನೀರು ಒದಗಿಸುವ ನಿಟ್ಟಿನಲ್ಲಿ ತ್ವರಿತವಾಗಿ ಐಸಿಸಿ ಸಭೆ ನಡೆಸಿ ರೈತರ ಹಿತ ಕಾಯೋ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಎಪ್ರಿಲ್ 01 ರಿಂದ 06 ರವರೆಗೆ ಕಾಲುವೆಗೆ ನೀರು ಹರಿಸಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಲಭ್ಯತೆ ಆಧಾರದ ಮೇಲೆ ಬೇಡಿಕೆಗನುಗುಣವಾಗಿ ನೀರು ಹರಿಸಲಾಗುವುದು, ನಾನು ಮತ್ತು ನಮ್ಮ ಸರ್ಕಾರ ಯಾವತ್ತೂ ರೈತರ ಪರವಾಗಿದೆ ನಮ್ಮ ಕ್ಷೇತ್ರದ ರೈತರ ಪರವಾಗಿ ಸರ್ಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಕಾಲುವೆ ನೀರನ್ನು ರೈತರು ಕೂಡ ಸಮರ್ಪಕವಾಗಿ ಬಳಸಿಕೊಳ್ಳಬೇಕು ಯಾವುದೇ ಕಾರಣಕ್ಕೂ ನೀರು ಪೋಲಾಗದಂತೆ ನೋಡಿಕೊಳ್ಳಬೇಕು ಎಂದು ರೈತರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.