ಯಾದಗಿರಿ: ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ
ಉತ್ತಮ ಫಲಿತಾಂಶ ಪಡೆದು ಬದಲಾವಣೆ ತನ್ನಿ: ಶಾಲಾ ಮಕ್ಕಳಿಗೆ ಶಾಸಕ ಕಂದಕೂರ ಸಲಹೆ

ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾವ ಕಾರಣಕ್ಕೆ ಶೈಕ್ಷಣಿಕವಾಗಿ ಹಿಂದುಳಿದಿವೆಯೋ ಗೊತ್ತಿಲ್ಲ. ಆದರೆ ಪ್ರತೀ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಮ್ಮ ಜಿಲ್ಲೆ ಕೊನೆಯ ಸ್ಥಾನದಲ್ಲಿ ಇರುವುದು ನೋಡಿ ತುಂಬಾ ನೋವಾಗುತ್ತದೆ. ಈ ಬಾರಿ ಅದಕ್ಕೆ ಅವಕಾಶ ಮಾಡಿಕೊಡದೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉತ್ತಮ ಫಲಿತಾಂಶ ಪಡೆಯುವ ಮುಖಾಂತರ ಬದಲಾವಣೆ ತರಬೇಕು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಾಲೂಕಿನ ಲಿಂಗೇರಿ ಸ್ಟೇಷನ್ ಮೊರಾರ್ಜಿ ವಸತಿ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಒಬ್ಬರ ಮೇಲೆ ಒಬ್ಬರು ಆರೋಪ ಮಾಡುವುದರಲ್ಲೇ ಎಂಬತ್ತು ವರ್ಷ ಕಳೆದಿವೆ ಈಗಲೂ ಅದನ್ನೇ ಮುಂದುವರೆಸೋದು ಬೇಡ. ಈ ವರ್ಷದ ಫಲಿತಾಂಶದಲ್ಲಿ ಹೆಚ್ಚಳ ಆಗಬೇಕು. ಮುಂದಿನ ಒಂದು ತಿಂಗಳು ಕಾಲ ಎಷ್ಟೇ ಅನಿವಾರ್ಯ ಇದ್ದರೂ ತಂದೆ ತಾಯಿಯ ಜತೆಗೆ ಜಮೀನುಗಳಿಗೆ ಹೋಗದೆ ಅಭ್ಯಾಸದ ಕಡೆಗೆ ಗಮನ ಕೊಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಈಗಾಗಲೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದು, ಅವರು ಈಗಾಗಲೇ ಎಲ್ಲ ಸರಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಂಬರುವ ದಿನದಲ್ಲಿ ಖಾಯಂ ಶಿಕ್ಷಕರ ನೇಮಕ ಮಾಡಿಕೊಳ್ಳುವ ಬಗ್ಗೆಯೂ ಸರಕಾರ ಭರವಸೆ ನೀಡಿದೆ. ನನ್ನ ಅಧಿಕಾರಾವಧಿಯಲ್ಲಿ ಬಂದಿರುವ ಅನುದಾನದಲ್ಲಿ ಶೇ.70-75ರಷ್ಟು ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ರೀತಿಯ ಸೌಲಭ್ಯ ಕಲ್ಪಿಸುವುದು ನನ್ನ ಜವಾಬ್ದಾರಿ ಅದಕ್ಕೆ ನಾನು ಬದ್ಧನಾಗಿದ್ದೇನೆ. ಆದರೆ ಈ ಸಲ ಎಸ್ಸೆಸ್ಸೆಲ್ಸಿ ಫಲಿತಾಂಶ ಮಾತ್ರ ಏರಿಕೆ ಆಗಲೇ ಬೇಕು, ರಾಜ್ಯದ ಶ್ರೇಣಿ ಪಟ್ಟಿಯಲ್ಲಿ ತಳದಿಂದ ನಾವು ಮೇಲೇರಬೇಕು. ಸಮಸ್ಯೆಗಳ ವಿರುದ್ಧ ಧ್ವನಿ ಎತ್ತದ ಹೊರತು ಸಮಸ್ಯೆಗಳಿಗೆ ಮುಕ್ತಿ ಪಡೆಯಲು ಸಾಧ್ಯವಿಲ್ಲ, ಸರಕಾರದ ಸವಲತ್ತುಗಳನ್ನು ಕೇಳಿ ಪಡೆಯುವ ಮನಸ್ಥಿತಿ ಪ್ರತಿಯೊಬ್ಬರಲ್ಲಿ ಬರಬೇಕು ಎಂದು ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಹಣಮಂತಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಚನ್ನಬಸಪ್ಪ, ಉಪ ತಹಶೀಲ್ದಾರ ಮಲ್ಲಪ್ಪ ಮಾಧ್ವಾರ, ಕ್ಷೇತ್ರ ಶಿಕ್ಷಣಾಧಿಕಾರಿ ಹವಳಪ್ಪ ಜಾನೇ, ನಿರ್ಮಿತಿ ಕೇಂದ್ರದ ಅಧಿಕಾರಿ ಕಿರಣ ಕುಮಾರ, ಲ್ಯಾಂಡ ಆರ್ಮಿಯ ಎಇಇ ಶಿವರಾಜ ಹುಡೇದ, ಬಸವರಾಜಪ್ಪಗೌಡ ಲಿಂಗೇರಿ, ಮಲ್ಲಣ್ಣಗೌಡ ಕೌಳೂರು, ಮಲ್ಲೇಶ ನಾಯಕ ಕೂಡ್ಲೂರು, ಹಣಮಂತ ನಾಯಕ, ಜಿಪಂ ಮಾಜಿ ಸದಸ್ಯ ಬಸವರಾಜ ಕಣೇಕಲ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ರಾಮಣ್ಣ ಕೋಟಗೇರಾ, ಬಸರೆಡ್ಡಿ ಹೆಗ್ಗಣಗೇರಾ, ಮಹಿಪಾಲರಡ್ಡಿ ಮಲ್ಹಾರ್, ಪರ್ವತರಡ್ಡಿ ಕಾಳೆಬೇಳಗುಂದಾ, ಶರಣಪ್ಪಗೌಡ ಹೊಸಳ್ಳಿ, ಅಲ್ಲಾವುದ್ದೀನ್ ನೀಲಹಳ್ಳಿ, ಲಕ್ಷ್ಮಣ ನಾಯಕ ಕೂಡ್ಲೂರು, ಗ್ರಾಪಂ ಮಾಜಿ ಅಧ್ಯಕ್ಷ ಮರೆಪ್ಪ ನಾಟೇಕರ, ಶರಣಗೌಡ ಕಾರಡ್ಡಿ, ಹಣಮಂತ ಇಸ್ಲಾಕರ, ಪರ್ವತಾರೆಡ್ಡಿ ಕಾಳೆಬೆಳಗುಂದಿ, ರಾಮು ದೊರೆ ಗೌಡಗೇರಾ ಸೇರಿದಂತೆ ಶಟ್ಟಿಗೇರಾ, ಬಳಿಚಕ್ರ ಗ್ರಾಮ ಮತ್ತು ತಾಂಡಾ, ಗೌಡಗೇರಾ ಗ್ರಾಮ ಮತ್ತು ತಾಂಡಾ ಸೇರಿದಂತೆ ಮುಂತಾದ ಗ್ರಾಮಗಳ ಜನರು ಹಾಗೂ ಮೊರಾರ್ಜಿ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಟಾಪ್ 10 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು:
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ತೇರ್ಗಡೆಯಾದ ಜಿಲ್ಲೆಯ 10 ವಿದ್ಯಾರ್ಥಿಗಳಿಗೆ ನಮ್ಮ ತಂದೆಯವರ ಹೆಸರಿನಲ್ಲಿ ಈಚೆಗೆ ಸ್ಥಾಪನೆ ಮಾಡಲಾದ ನಾಗನಗೌಡ ಕಂದಕೂರ ಫೌಂಡೇಶನ ಮುಖಾಂತರ ಪಿಯು ಕಾಲೇಜು ಶಿಕ್ಷಣಕ್ಕೆ ನೆರವು ನೀಡಬೇಕು ಎಂಬ ಅಪೇಕ್ಷೆ ಹೊಂದಿದ್ದೇನೆ. ಈ ಬಾರಿ ನಮ್ಮ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ 100 ಪರ್ಸೆಂಟ್ ಫಲಿತಾಂಶ ಪಡೆದುಕೊಳ್ಳಬೇಕು. ಸರಕಾರದ ಮಂತ್ರಿ, ಅಧಿಕಾರಿಗಳನ್ನು ಕಾಡಿ ಬೇಡಿ ಅನುದಾನ ತಂದು ನಾನು ನಿಮಗೆ ಸೌಲಭ್ಯಗಳನ್ನು ಕಲ್ಪಿಸುತ್ತೇನೆ. ಅದಕ್ಕೆ ಪ್ರತಿಯಾಗಿ ನೀವು ನನಗೆ ಫಲಿತಾಂಶ ತಂದುಕೊಡಬೇಕು ಎಂದು ಶಾಸಕ ಶರಣಗೌಡ ಕಂದಕೂರ ಅವರು ವಿದ್ಯಾರ್ಥಿಗಳಿಗೆ ಹೇಳಿದರು.
ಶೈಕ್ಷಣಿಕ ಪ್ರಗತಿಗೆ ಶಾಸಕರ ಕೊಡುಗೆ ಅಪಾರ, ಮೊರಾರ್ಜಿ ವಸತಿ ಶಾಲೆಗಳಿಗೆ ಮೂಲ ಸೌಲಭ್ಯಗಳ ಜತೆಗೆ ಹೈಮಾಸ್ಟ್ ದೀಪಗಳ ಅಳವಡಿಕೆ ಮಾಡಿದ್ದಾರೆ. ಅದರಂತೆ ಲಿಂಗೇರಿ ಸ್ಟೇಷನ್ ವಸತಿ ಶಾಲೆಗೆ ಟ್ರ್ಯಾಕ್ ಹಾಗೂ ವಿದ್ಯಾರ್ಥಿಗಳಿಗೆ ಭೋಜನಾಲಯ, ಕಂಪ್ಯೂಟರ್ ಲ್ಯಾಬ್ ಅವಶ್ಯವಿದೆ. ಹಿಂದುಳಿದ ಕಲ್ಯಾಣ ಕರ್ನಾಟಕ ಅಭಿವೃದ್ಧಿಯಲ್ಲಿ ಕಲ್ಯಾಣ ಪಥವಾಗಿ ಸಾಗಲಿ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಚನ್ನಬಸಪ್ಪ ಅವರು ಮನವಿ ಮಾಡಿದರು. ಇದಕ್ಕೆ ತಕ್ಷಣ ಸ್ಪಂದಿಸಿದ ಶಾಸಕ ಕಂದಕೂರ ಅವರು ಕೂಡಲೇ ಬೇಡಿಕೆ ಪಟ್ಟಿ ಸಲ್ಲಿಸುವಂತೆ ಸೂಚಿಸಿದರು.
ವಿವಿಧ ಕಾಮಗಾರಿಗೆ ಚಾಲನೆ
ಗುರುಮಠಕಲ್ ಮತಕ್ಷೇತ್ರದ ಲಿಂಗೇರಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಸಿಸಿ ನೆಲಹಾಸು, ಶೌಚಾಲಯ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ 1.10ಕೋಟಿ, ಬಳಿಚಕ್ರ ಸಣ್ಣ ತಾಂಡಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತಡೆಗೋಡೆ ನಿರ್ಮಾಣ 12 ಲಕ್ಷ, ಸಾವೂರು, ಹೆಗ್ಗಣಗೇರಾ, ಗ್ರಾಮದಲ್ಲಿ ಸಿಸಿ ಮತ್ತು ಚರಂಡಿ ನಿರ್ಮಾಣ ತಲಾ 10 ಲಕ್ಷ, ಜಿನಕೇರಾ ಗ್ರಾಮದ ಸ.ಹಿ.ಪ್ರಾಥಮಿಕ ಶಾಲೆ ಅಕ್ಷರ ಅವಿಷ್ಕಾರ ಅನುಷ್ಠಾನ 56.12ಲಕ್ಷ, ಕೌಳೂರು ಸರಕಾರಿ ಶಾಲೆಯ ಅಕ್ಷರ ಅವಿಷ್ಕಾರ ಅನುಷ್ಠಾನ 34.01ಲಕ್ಷ, ಕೂಡಲೂರು ಗ್ರಾಮದಿಂದ ಗೌಡಗೇರಾ ಗ್ರಾಮದವರೆಗೆ ರಸ್ತೆ ನಿರ್ಮಾಣ 160 ಲಕ್ಷ, ಕಾಳೆಬೆಳಗುಂದಿ ತಾಂಡ, ಜಿನಕೇರಾ ತಾಂಡ, ಮಲ್ಹಾರ ತಾಂಡ, ಲಿಂಗೇರಿ ತಾಂಡ ಗಳಲ್ಲಿ ಸಿಸಿ ಮತ್ತು ಚರಂಡಿ ನಿರ್ಮಾಣ ತಲಾ 10 ಲಕ್ಷ, ಕೂಡಲೂರು ಗ್ರಾಮದ ಎಸ್.ಟಿ ವಾರ್ಡಲ್ಲಿ, ನಾಗರಬಂಡಿ ಗ್ರಾಮದಲ್ಲಿ ಸಿಸಿ ಮತ್ತು ಚರಂಡಿ ನಿರ್ಮಾಣ ತಲಾ 20 ಲಕ್ಷ, ಬಳಿಚಕ್ರ ಮತ್ತು ಜಿನಕೇರಾ ಗ್ರಾಮದಲ್ಲಿ ಸಿಸಿ ಮತ್ತು ಚರಂಡಿ ನಿರ್ಮಾಣ ತಲಾ 10 ಲಕ್ಷ ಗಳ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಮತ್ತು ಉದ್ಘಾಟನೆಯನ್ನು ಶಾಸಕ ಶರಣಗೌಡ ಕಂದಕೂರ ನೇರವೇರಿಸಿದರು.
ಅಕ್ಷರ ಆವಿಷ್ಕಾರ ಯೋಜನೆ ಮುಖಾಂತರ ಗುರುಮಠಕಲ್ ಮತಕ್ಷೇತ್ರ ಎಲ್ಲ ಶಾಲೆಗಳಿಗೆ ಶೌಚಾಲಯಗಳ ನಿರ್ಮಾಣ ಹಾಗೂ ಅದಕ್ಕೆ ನೀರಿನ ಸೌಲಭ್ಯ ಕಲ್ಪಿಸಿಕೊಡಲು ನಿರ್ಧರಿಸಿದ್ದು, ಬೇಸಿಗೆ ಮುಗಿದು ಜೂನ್ ತಿಂಗಳಲ್ಲಿ ಶಾಲಾರಂಭಕ್ಕೆ ಮುನ್ನವೇ ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶೈಕ್ಷಣಿಕ ಗುಣಮಟ್ಟ ಸುಧಾರಣೆ ಮುಖಾಂತರ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳ ಮಾಡುವುದು ಅತ್ಯವಶ್ಯಕವಾಗಿದೆ ಇದಕ್ಕೆ ಶಿಕ್ಷಕ, ವಿದ್ಯಾರ್ಥಿಗಳ ಜತೆಗೆ ಪೋಷಕರ ಸಹಕಾರ ಜರೂರಿದೆ.
- ಶರಣಗೌಡ ಕಂದಕೂರ, ಶಾಸಕ, ಗುರುಮಠಕಲ್ ಮತಕ್ಷೇತ್ರ