ಯಾದಗಿರಿ: ಅರ್ಹರು ಪಂಚಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಿದಂತೆ ಎಚ್ಚರಿಕೆ ವಹಿಸಿ; ಶ್ರೇಣಿಕಕುಮಾರ್ ದೋಖಾ

ಯಾದಗಿರಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾದ ಪಂಚ ಗ್ಯಾರಂಟಿ ಯೋಜನೆಗಳಡಿ ಶೇ. 100 ರಷ್ಟು ಪ್ರಗತಿ ಸಾಧಿಸುವಂತೆ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶ್ರೀ ಶ್ರೇಣಿಕಕುಮಾರ್ ದೋಖಾ ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಪಂಚ ಗ್ಯಾರಂಟಿ ಯೋಜನೆಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಕ್ತಿ ಯೋಜನೆ, ಅನ್ನಭಾಗ್ಯ ಡಿ. ಬಿ. ಟಿ ನಗದು ವರ್ಗಾವಣೆ ಯೋಜನೆ,ಗೃಹ ಜ್ಯೋತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆ ಹಾಗೂ ಯುವ ನಿಧಿ ಯೋಜನೆಗಳು ಸರ್ಕಾರದ ಅತ್ಯಂತ ಮಹತ್ವದ ಯೋಜನೆಗಳಾಗಿದ್ದು, ಅಧಿಕಾರಿಗಳು ವಿಶೇಷ ಗಮನ ನೀಡಿ, ಗುರಿಗೆ ತಕ್ಕಂತೆ ಶೇ.ನೂರರಷ್ಟು ಪ್ರಗತಿ ಸಾಧಿಸಲು ಸೂಚಿಸಿದರು.
ಈ ಯೋಜನೆಗಳಡಿ ತಾಲೂಕಾವಾರು ನೋಂದಣಿ, ಸಹಾಯಧನ ವಿತರಣೆ,ಇತರೆ ಚಟುವಟಿಕೆಗಳು ಪೂರ್ಣಗೊಂಡು ಅರ್ಹರು ವಂಚಿತರಾಗದಂತೆ ನಿಗಾವಹಿಸಬೇಕು ಎಂದು ಅವರು ಸೂಚಿಸಿದರು.
ಶಕ್ತಿ ಯೋಜನೆಯಡಿ ಫೆಬ್ರವರಿವರೆಗೆ 43054001 ಪ್ರಯಾಣಿಕರು ಪ್ರಯಾಣಿಸಿದ್ದಾರೆ,2,12,31,85,560 ರೂ(ಜುಲೈ 23 ರಿಂದ ಅಕ್ಟೋಬರ್ 24 ವರೆಗೆ)ಅನ್ನಭಾಗ್ಯ ಯೋಜನೆ ಅಡಿ ನಗದು ಪಾವತಿಸಲಾಗಿದೆ, ಗೃಹ ಜ್ಯೋತಿ ಯೋಜನೆಯಡಿ 95.36ಪ್ರತಿಶತ ಫಲಾನುಭವಿಗಳು ಸದುಪಯೋಗ ಪಡೆದುಕೊಂಡಿದ್ದಾರೆ. ಗೃಹಲಕ್ಷ್ಮೀ ಯೋಜನೆಯಡಿ 97.31 ಪ್ರತಿಶತರಷ್ಟು ಪ್ರಗತಿ ಸಾಧಿಸಲಾಗಿದೆ. ಯುವ ನಿಧಿ ಯೋಜನೆಯಡಿ 7378 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಿಯಾ , ಜಿಲ್ಲಾ ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಹಣಮಂತ ಕಣಳ್ಳಿ ,ರಮೇಶ್ ದೋರಿ, ಬಸವರಾಜ ಬಿಳ್ಹಾರ್ , ಸಮಿತಿ ಸದಸ್ಯರು , ಅಧಿಕಾರಿಗಳು ಉಪಸ್ಥಿತರಿದ್ದರು.