ಸೈದಾಪುರ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ

ಸೈದಾಪುರ: ಸುಖದಲ್ಲಿ ತ್ಯಾಗಮಯಿಯಾಗಿ, ಸಂಕಷ್ಟದಲ್ಲಿ ಕಷ್ಟವನ್ನು ನಿವಾರಿಸುವ ಹೆಣ್ಣು ಬಹುಮುಖ ಪ್ರತಿಭೆಯ ಮಾಣಿಕ್ಯ ಎಂದು ಯಾದಗಿರಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅಭಿಪ್ರಾಯಪಟ್ಟರು.
ಪಟ್ಟಣದ ಗುರುಕುಲ ವಿದ್ಯಾಪೀಠ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹೆಣ್ಣು ಹುಣ್ಣಲ್ಲ, ಸಮಾಜದ ಕಣ್ಣು ಎಂಬ ವಿಷಯ ಕುರಿತು ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲು ಗುರು. ಆದ್ದರಿಂದ ಅವರಲ್ಲಿ ಆತ್ಮವಿಶ್ವಾಸ, ಸಕರಾತ್ಮಕ ಚಿಂತನೆ ಬೆಳೆಸುವಲ್ಲಿ ತಾಯಿಯ ಪಾತ್ರ ದೊಡ್ಡದು. ಹೆಣ್ಣಿನಲ್ಲಿ ಎಲ್ಲವನ್ನು ಸಹಿಸಿಕೊಳ್ಳುವ ಗುಣವಿದೆ. ಬದಲಾದ ಸ್ಪರ್ಧಾತ್ಮಕ ಆಧುನಿಕತೆಯ ಯುಗದಲ್ಲಿ ಗಂಡು-ಹೆಣ್ಣು ಸಮ ಸಮಾಜದ ಕಣ್ಣು ಎಂದು ತಿಳುವಳಿಕೆ ಮೂಡಿಸಿದರು ಕೂಡ ಇಂದಿಗೂ ಲಿಂಗತಾರತಮ್ಯ ಇನ್ನು ನಿಂತಿಲ್ಲ. ಹೆಣ್ಣು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತಗೊಳಿಸಿದಂತಾಗಿದೆ. ದೇಶದ ಅಭಿವೃದ್ಧಿಯಲ್ಲಿ ಪುರುಷರಷ್ಟೇ ಸರಿಸಮಾನವಾಗಿ ಮಹಿಳೆಯ ಕೊಡುಗೆ ನೀಡುತ್ತಿದ್ದಾಳೆ. ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಆದರೂ ಕೂಡ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯ ಮಾತ್ರ ನಿಲ್ಲುತ್ತಿಲ್ಲ. ಕಾರಣ ಸ್ತ್ರೀಯು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿರುವುದು. ಆದ್ದರಿಂದ ಪೋಷಕರು ಹೆಣ್ಣು-ಗಂಡು ಎಂಬ ಭೇದ ಭಾವ ತೋರದೆ ಉತ್ತಮ ಶಿಕ್ಷಣ ಕೊಡಬೇಕು ಎಂದು ಕಿವಿ ಮಾತು ಹೇಳಿದರು.ಮೂಡಿಸಿದರು
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಜು ದೊರೆ, ಮುಖ್ಯಶಿಕ್ಷಕ ಮಲ್ಲಿಕಾರ್ಜುನ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕವಿತಾ ಮಿರಿಯಾಲ, ಅಂಗನವಾಡಿ ಮೇಲ್ವಿಚಾರಕಿ ಅನಿತಾ ದೊಡ್ಡಮನಿ, ಸ್ವಾಮಿ ವಿವೇಕಾನಂದ ಮಹಿಳಾ ಸಂಘದ ಅಧ್ಯಕ್ಷೆ ಕಮಲ ಕುಲಕರ್ಣಿ, ಧರ್ಮಸ್ಥಳ ಸಂಘದ ಮೇಲ್ವಿಚಾರಕಿ ರಂಗಮ್ಮ, ಕಾಶಿನಾಥ ಶೇಖಸಿಂಧಿ, ಭೀಮಣ್ಣ ಮಡಿವಾಳಕರ್, ಲಕ್ಷ್ಮಣ ಓಬಳಾಪುರ ನೀಲಹಳ್ಳಿ, ಅಮರೇಶ ನಾಯಕ ಕೂಡ್ಲೂರು, ಶಿಕ್ಷಕಿಯರಾದ ಮರಿಲಿಂಗಮ್ಮ, ಮಹೇಶ್ವರಿ, ಆಸೀಫಾ ನಬಿಚಾಂದ್, ಸಾನಿಯಾ ಸಮರೀನ್, ಸ್ವಾತಿ, ನಾಗಮ್ಮ, ಹೃತಿಕಾ, ಶ್ರೀದೇವಿ, ವಿದ್ಯಾರ್ಥಿಗಳು ಹಾಗೂ ಅಂಗನವಾಡಿ ಶಿಕ್ಷಕಿಯರು, ಕಾರ್ಯಕರ್ತರು, ಸೇರಿದಂತೆ ಇತರರಿದ್ದರು.