ಮೂಲ ಸೌಕರ್ಯ ಕೊರತೆ, ಸ್ವಚ್ಛತೆ ಮರೀಚಿಕೆ, ಗ್ರಾಮಸ್ಥರ ಬದುಕು ನಿತ್ಯ ನರಕ: ಉಮೇಶ ಮುದ್ನಾಳ ಆಕ್ರೋಶ
ಯಾದಗಿರಿ: ಸೈದಾಪೂರ ಹೋಬಳಿಗೆ ಬರುವ ಅಜಲಾಪೂರ ಗ್ರಾಮದ ಗ್ರಾಂ ಪಂ. ಕೇಂದ್ರಸ್ಥಾನದ ಮುಂಭಾಗದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಗ್ರಾಮಸ್ಥರು ದಿನ ನಿತ್ಯ ನರಕ ಯಾತನೆ ಅನುಭವಿಸುವಂತಾಗಿದೆ ಎಂದು ಕರ್ನಾಟಕ ಪ್ರದೇಶ ಕೋಲಿ ಸಮಾಜ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ ಆಕ್ರೋಶ ವ್ಯಕ್ತಪಡಿಸಿದರು.
ಚರಂಡಿ ನೀರು ಮುಖ್ಯ ರಸ್ತೆಯ ಮೇಲೆ ಹರಿದು ದೊಡ್ಡ ದೊಡ್ಡ ಗಾತ್ರದ ತಗ್ಗು ಗುಂಡಿಗಳು ಬಿದ್ದಿವೆ. ಅಲ್ಲಲ್ಲಿ ನಿರ್ಮಾಣಗೊಂಡ ಹೊಂಡಗಳಲ್ಲಿ ಕೊಳಚೆ ನೀರು ತುಂಬಿ ಚರಂಡಿಯಾಗಿ ಪರಿಣಮಿಸಿದೆ. ಗ್ರಾಮಸ್ಥರು ವಾಹನ ಸವಾರರಿಗೆ ಸಂಚಾರಕ್ಕೆ ಅಡಿಯುಂಟಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ. ರಸ್ತೆ ಮತ್ತು ಒಳ ಚರಂಡಿ ತುಂಬಿ ಗಬ್ಬೆದ್ದು ನಾರುತ್ತಿವೆ. ಗುರುಮಠಕಲ್ ತಾಲೂಕಿನ ಅಜಲಾಪೂರ ಗ್ರಾಮದ ಒಳಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವ ಹಿನ್ನೆಲೆಯಲ್ಲಿ ದುರ್ವಾಸನೆ ಬೀರುತ್ತಿದೆ. ಚರಂಡಿ ಇಲ್ಲದ ಕಾರಣ ಗ್ರಾಮದ ಕಲಷಿತ ನೀರು ರಸ್ತೆಯ ಮೇಲೆ ಹರಿದು ಕಸ, ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಗೊಂಡು ಗಬ್ಬೆದ್ದು, ನಾರುತ್ತಿದೆ ಎಂದು ಆರೋಪಿಸಿದರು.
ಕೊಳಚೆ ಪ್ರದೇಶದಿಂದ ಎಲ್ಲಾ ಕಡೆ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಶುರುವಾಗಿದೆ. ಸೌಜನ್ಯಕ್ಕಾದರೂ ಸೊಳ್ಳೆಗಳನ್ನು ನಿಯಂತ್ರಿಸಲು ಮಾತ್ರ ಯಾವುದೇ ರೀತಿಯಿಂದ ಕ್ರಮಕೈಗೊಂಡಿಲ್ಲ. ಮುನ್ನೆಚ್ಚರಿಕೆ ಒಳಚರಂಡಿ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಇಲ್ಲಿಯವರೆಗೂ ಸಹ ಯಾವುದೇ ಪ್ರಯೋಜನವಾಗಿಲ್ಲವೆಂದು ಕರ್ನಾಟಕ ಪ್ರದೇಶ ಕೋಲಿ ಸಮಾಜ ರಾಜ್ಯ ಸಂಘಟನಾ ಕಾರ್ಯದರ್ಶೀ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ ಮುದ್ನಾಳ ಆರೋಪಿಸಿದರು.
ಕೂಡಲೇ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು, ರಸ್ತೆ ದುರಸ್ತಿ ಮಾಡಿಸಬೇಕು.ಸೊಳ್ಳೆಗಳ ನಿಯಂತ್ರಣಕ್ಕೆ ಬ್ಲಿಚಿಂಗ್ ಸಿಂಪರಣೆ ಮಾಡಿ ಫಾಗಿಂಗ್ ಮಾಡಿಸಬೇಕು. ಒಳಚರಂಡಿ ನಿರ್ಮಿಸಲು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಹಳ್ಳಿಗಳ ಅಭಿವೃದ್ಧಿಗೆ ರಾಜ್ಯ ಸರಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಆದರೆ ಬಂದ ಹಣ ಎಲ್ಲಿ ಹೋಗುತ್ತದೆ ಎಂಬುದು ತಿಳಿಯದಂತಾಗಿದೆ. ಸಂಬಂಧಪಟ್ಟವರ ನಿರ್ಲಕ್ಷ್ಯದಿಂದಾಗಿ ಮೂಲ ಸೌಲಭ್ಯಗಳಿಂದ ವಂಚಿತಗೊಂಡಿದ್ದೇವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.