ಕರ್ನಾಟಕದ ನೆಲ, ಜಲ, ನಾಡು, ನುಡಿಯ ರಕ್ಷಣೆಗೆ ಶ್ರಮಿಸೋಣ : ಸಚಿವ ಶರಣಬಸಪ್ಪಗೌಡ ದರ್ಶನಾಪೂರ
ಯಾದಗಿರಿ : ಕರ್ನಾಟಕದ ನೆಲ, ಜಲ, ನಾಡು, ನುಡಿಯ ರಕ್ಷಣೆಗೆ ನಾವೆಲ್ಲರೂ ಬದ್ದರಾಗೋಣ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಹೇಳಿದ್ದಾರೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ವಿವಿಧ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಹಲವರ ತ್ಯಾಗ ಬಲಿದಾನದ ಫಲವಾಗಿ ದೊರೆತ ಈ ನೆಲ, ಜಲ, ನಾಡು ,ನುಡಿಯ ರಕ್ಷಣೆ ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ಬದ್ದರಾಗೋಣ ಎಂದು ಹೇಳಿದರು.
ಕಲ್ಯಾಣ ಕರ್ನಾಟಕದಲ್ಲಿ ಹಾಗೂ ವಿಶೇಷವಾಗಿ ಯಾದಗಿರಿ ಜಿಲ್ಲೆಗೆ ಸರಕಾರ ನೀರಾವರಿ, ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ ಕಲ್ಪಿಸಿ ನೆರವಾಗಿದೆ. ನೂತನ ವೈದ್ಯಕೀಯ ಕಾಲೇಜ್, ಆಡಳಿತ ಕಚೇರಿ, ಶಾಲೆ ಕಾಲೇಜುಗಳನ್ನು ಸ್ಥಾಪಿಸಿದೆ. ನೂತನ ನರ್ಸಿಂಗ್ ಕಾಲೇಜಿಗೂ ಸಹ ಮಂಜೂರಾತಿ ನೀಡಿದೆ ಎಂದು ಹೇಳಿದರು.
ರಾಜ್ಯ ಸರಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಬಡ ಜನರಿಗೆ ಆರ್ಥಿಕ ಬಲ ತುಂಬಿದೆ. ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿದೆ. ಕರ್ನಾಟಕದ ಏಕೀಕರಣ ಹೋರಾಟ, ಬುದ್ಧ ಬಸವಾದಿ ಶರಣರು, ಮಹಾತ್ಮ ಗಾಂಧೀಜಿ, ಡಾ .ಬಾಬಾಸಾಹೇಬ್ ಅಂಬೇಡ್ಕರ್, ಜವಾಹರಲಾಲ್ ನೆಹರು, ಸೇರಿದಂತೆ ಕರ್ನಾಟಕದ ಭವ್ಯ ಇತಿಹಾಸ ಸ್ಮರಿಸಿದ ಅವರು ಈ ನಾಡಿನ ಕನ್ನಡ ಭಾಷೆಯ ಅಭ್ಯುದಯಕ್ಕೆ ಹಾಗೂ ಇತರ ಭಾಷೆಗಳಿಗೂ ಗೌರವ ನೀಡಿ, ಜಾತಿ, ಮತ, ಪಂಥ ಬದಿಗೊತ್ತಿ ನಾಡಿನ ಸೇವೆ ಮಾಡೋಣ ಹಾಗೂ ಕೀರ್ತಿ ಬೆಳಗಿಸೋಣ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾಧನೆಗೈದವರಿಗೆ ಸನ್ಮಾನಿಸಲಾಯಿತು. ವಿವಿಧ ಇಲಾಖೆ ಗಳ ಅಭಿವೃದ್ಧಿ ಕಾರ್ಯಕ್ರಮಗಳ ಸ್ತಬ್ಧ ಚಿತ್ರ ,ಮಕ್ಕಳ ಸಾಂಸ್ಕೃತಿಕ, ಕವಾಯತು ಕಾರ್ಯಕ್ರಮಗಳು ಗಮನ ಸೆಳೆದವು.
ಈ ಸಂದರ್ಭದಲ್ಲಿ ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ವಿನಾಯಕ ಪಾಟೀಲ್, ನಗರಸಭೆ ಅಧ್ಯಕ್ಷ ಲಲಿತಾ ಅನಪೂರ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ , ಅಪರ ಜಿಲ್ಲಾಧಿಕಾರಿ ಶ್ರೀ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತರು ಡಾ.ಹಂಪಣ್ಣ ಸಜ್ಜನ್, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ಧರಣೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರನಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರದೇವಿ ಮಠಪತಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.