ವೈಚಾರಿಕ ಚಿಂತನೆಗೆ ಎಲ್ಲರೂ ಒಗ್ಗೂಡುವುದು ಅಗತ್ಯ: ಮುರುಘರಾಜೇಂದ್ರ ಸ್ವಾಮೀಜಿ
ಯಾದಗಿರಿ: ಇಂದಿನ ಒತ್ತಡದ ಬದುಕಿನಲ್ಲಿ ಎಲ್ಲರಿಗೆ ಒಂದೆಡೆ ಸೇರುವುದೇ ಕಷ್ಟದ ಕೆಲಸ. ಆದರೆ ಎಲ್ಲರು ಸೇರಿ ಬಸವ ತತ್ವ ಚಿಂತನೆ ನಡೆಸುವುದು ಅಗತ್ಯವಾಗಿದೆ ಎಂದು ಗುರುಮಠಕಲ್ ಖಾಸಾ ಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.
ಸುರಪುರ ನಗರದ ರಂಗಂಪೇಟೆಯ ನೀಲಕಂಠೇಶ್ವರ ದೇವಸ್ಥಾನದ ಬಳಿ ಲಿಂ.ಬಸವಲಿಂಗಮ್ಮ ಶಿವಲಿಂಗಪ್ಪ ಗುಂಡಾನೂರರ 23ನೇ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಬಸವತತ್ವ ಸಮಾವೇಶದ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.
ಮಾನವನ ಬದುಕು ಹಸನಾಗಲು ಬಸವಾದಿ ಶರಣರ ವಚನಗಳು ಅಗತ್ಯವಾಗಿದೆ. ಇದನ್ನು ಅರಿತು ಗುಂಡಾನೂರ ಪರಿವಾರ ಕಳೆದ 23 ವರ್ಷಗಳಿಂದ ಬಸವತತ್ವ ಸಮಾವೇಶ ನಡೆಸುತ್ತಿದ್ದು, ನಾನು ಇದರಲ್ಲಿ ನಿರಂತರವಾಗಿ ಭಾಗವಹಿಸಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಶರಣ ಸಾಹಿತಿ, ಪತ್ರಕರ್ತ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿ, ಬಸವಾದಿ ಶರಣರ ವಚನಗಳನ್ನು ಅರಿತುಕೊಂಡು ನಡೆ ನುಡಿಯಲ್ಲಿ ಅಳವಡಿಸಿಕೊಂಡಲ್ಲಿ ಯಾವುದೇ ಮೂಢಾಚರಣೆಗಳು ಹತ್ತಿರ ಬರುವುದಿಲ್ಲ,ಆದರೆ ಇಂದು ಯುವ ಜನಾಂಗ ವೈಚಾರಿಕತೆಗಿಂತ ಮೂಢಾಚರಣೆಗಳತ್ತ ಹೆಚ್ಚು ಆಸಕ್ತರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಅನುಭಾವ ನೀಡಿದ ಶರಣತತ್ವ ಪ್ರಚಾರಕ ಅಶೋಕ ಅಂಚಲಿ ಮಾತನಾಡಿ, ಬಸವಾದಿ ಶರಣರ ವಿಚಾರಗಳನ್ನು ಅನೇಕರು ಕಟುವಾಗಿ ತಿಳಿಸಲು ಮುಂದಾಗುತ್ತಿದ್ದು, ಜನರು ಇದರಿಂದ ಬೈಯುತ್ತಾರೆ ಎನ್ನುವ ಭಾವದಿಂದ ದೂರ ಉಳಿಯುತ್ತಿದ್ದಾರೆ. ಆದರೆ ಬಸವತತ್ವ ಚಿಂತನೆಯಿಂದ ಬದುಕು ಹಸನಾಗುತ್ತದೆ ಎನ್ನುವುದನ್ನು ಸಮಾಧಾನದಿಂದ ಅರಿವು ಮೂಡಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ರಂಗಂಪೇಟೆ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸೂಗುರೇಶ ವಾರದ ಮಾತನಾಡಿ, ಬಸವಣ್ಣನವರ ಬಗ್ಗೆ ಲಿಂಗಾಯತ ಧರ್ಮದ ಬಗ್ಗೆ ಅರಿತುಕೊಳ್ಳದೆ ಬಸನಗೌಡ ಪಾಟೀಲ್ ಯತ್ನಾಳ ಅವಿವೇಕದ ಮಾತನಾಡುತ್ತಾರೆ, ಜನರು ಅಂತವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.
2025ನೇ ಸಾಲಿನ ಬಸವ ದಿನಚರಿಯನ್ನು ಸಾಹಿತಿ ಶಿವಣ್ಣ ಇಜೇರಿ ಲೋಕಾರ್ಪಣೆಗೊಳಿಸಿದರು.
ಇದೇ ಸಂದರ್ಭದಲ್ಲಿ ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತ ಆಮಯ್ಯಸ್ವಾಮಿ ಮಠಪತಿ, ಆರೋಗ್ಯ ಇಲಾಖೆಯ ಡಾ.ದುಂಡಪ್ಪ ಚವ್ಹಾಣ ರನ್ನು ಸನ್ಮಾನಿಸಿ ಗೌರವಿಸಲಾಯಿತು. ಚನ್ನಮಲ್ಲಿಕಾರ್ಜುನ ಗುಂಡಾನೂರ, ಪದ್ಮಾ ನಾಲವಾರ, ಶಂಕರ ಅಲ್ಲೂರ, ವಚನ ಆರ್.ಕುಂಬಾರ ವಚನ ಗಾಯನ ನಡೆಸಿದರು.
ಮಲ್ಲಿಕಾರ್ಜುನ ಸತ್ಯಂಪೇಟೆ, ಚನ್ನಬಸವ ಬಾಗೋಡಿ,ಡಾ.ಎನ್.ಡಿ ಪುರತಗಿರಿ, ಅಂಬ್ರೇಶ ಕುಂಬಾರ, ಈರಣ್ಣ ಗುಳೆದಗುಡ್ಡ, ಸಂಗಪ್ಪ ಬಂಡಿ, ಹಣಮಂತ ಕೊಂಗಂಡಿ ಸಹಿತ ಹಲವರು ಭಾಗವಹಿಸಿದ್ದರು.
ಪತ್ರಕರ್ತ ರಾಜು ಕುಂಬಾರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿವರುದ್ರ ಉಳ್ಳಿ ವಂದಿಸಿದರು.