ಅಶ್ಲೀಲ ವಿಡಿಯೋ ಪ್ರಕರಣ | ಪ್ರಜ್ವಲ್ ರೇವಣ್ಣ ಅಮಾನತಿಗೆ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಆಗ್ರಹ
Photo : facebook.com
ಯಾದಗಿರಿ : ಹಾಸನ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಅಮಾನತುಗೊಳಿಸಲು ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಒತ್ತಾಯಿಸಿದ್ದಾರೆ.
ಈ ಸಂಬಂಧ ಜೆಡಿಎಸ್ ಪಕ್ಷ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯಾದ್ಯಂತ ಕೆಲದಿನಗಳಿಂದ ಅಶ್ಲೀಲ ವಿಡಿಯೋಗಳ ತುಣುಕುಗಳಿಂದ ನಮ್ಮ ಪಕ್ಷಕ್ಕೆ ತೀರಾ ಮುಜುಗರ ಉಂಟಾಗಿದ್ದು, ಈ ವಿಡಿಯೊ ದೃಶ್ಯಗಳಲ್ಲಿ ಪ್ರಜ್ವಲ್ ಅವರು ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಮೇಲ್ನೋಟಕ್ಕೆ ಅವರು ತಪ್ಪಿತಸ್ಥರೆಂದು ಭಾವನೆ ಉಂಟಾಗಿದ್ದು,ಅವರನ್ನು ಪಕ್ಷದಿಂದ ಕೂಡಲೇ ಅಮಾನತು ಮಾಡಲು ತಮ್ಮಲ್ಲಿ ಕೋರುತ್ತೇನೆ ಎಂದು ಒತ್ತಾಯಿಸಿದ್ದಾರೆ.
ಪಕ್ಷದ ಚಿಹ್ನೆಯು ಭತ್ತ ಹೊತ್ತ ಮಹಿಳೆಯಾಗಿದ್ದು, ಜಾತ್ಯತೀತ ನೆಲೆಗಟ್ಟಿನ ಮೇಲೆ ಪಕ್ಷವನ್ನು ಕಟ್ಟಿದ್ದೀರಿ. ನಿಮಗೆ ಮಹಿಳೆಯರ ಮೇಲಿರುವ ಗೌರವವನ್ನು ಇದು ಪ್ರತಿನಿಧಿಸುತ್ತದೆಂದು ಎಲ್ಲರೂ ಭಾವಿಸಿದ್ದಾರೆ. ಈ ಪರಂಪರೆಯನ್ನು ಹೊಂದಿರುವ ಪಕ್ಷಕ್ಕೆ ವಿಡಿಯೋ ಪ್ರಕರಣ ತೀವ್ರ ಮುಜುಗರ ತಂದಿರುವುದಂತೂ ಸುಳ್ಳಲ್ಲ.
ನಾನು ತುಂಬಾ ಕಿರಿಯ, ಅತ್ಯಂತ ಹಿರಿಯರಾದ ತಮಗೆ ಸಲಹೆ ಕೊಡುವಷ್ಟು ದೊಡ್ಡವನ್ನಲ್ಲ. ಆದರೆ, ಪರಿಸ್ಥಿತಿ ಹಾಗೆ ಬಂದೊದಗಿದೆ. ಹೀಗಾಗಿ ತಮಗೆ ನಾನು ಪತ್ರ ಬರೆದು ನನ್ನ ಅಂತರಾಳದ ಅಭಿಪ್ರಾಯಗಳನ್ನು ಮುಕ್ತಮನಸ್ಸಿನಿಂದ ವ್ಯಕ್ತಪಡಿಸುತ್ತಿರುವೆ ಎಂದು ಹೇಳಿದ್ದಾರೆ.
ಈ ಕುರಿತು ಇನ್ನೋರ್ವ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, ಪಕ್ಷದ ರಾಷ್ಟ್ರಾಧ್ಯಕ್ಷರು ಎಚ್.ಡಿ. ದೇವೇಗೌಡರು, ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕಾದ ಸಮಯವಿದಾಗಿದೆ. ನಿಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ 19 ಜನ ಶಾಸಕರ ಭವಿಷ್ಯ ಬೇಕೋ ತಮ್ಮ ಕುಟುಂಬದ ರೇವಣ್ಣ, ಪ್ರಜ್ವಲ್ ಅವರು ಮುಖ್ಯವೋ ತೀರ್ಮಾನಿಸಬೇಕಿದೆ.
24 ಗಂಟೆಗಳಲ್ಲಿ ಆರೋಪ ಹೊತ್ತಿರುವ ರೇವಣ್ಣ ಮತ್ತು ಪ್ರಜ್ವಲ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಸಿದ್ಧಾಂತಗಳನ್ನು ಉಳಿಸಿ ಕಾರ್ಯಕರ್ತರನ್ನು ನಮ್ಮನ್ನು ಮುಜುಗರದಿಂದ ಪಾರು ಮಾಡಲು ಕೋರುತ್ತೇನೆ ಎಂದು ಹೇಳಿದ್ದಾರೆ.