ಯಾದಗಿರಿ: ಮಾ.8ರಂದು ರಾಷ್ಟ್ರೀಯ ಲೋಕ್ ಅದಾಲತ್
ರಾಜಿ ಸಂಧಾನದ ಮೂಲಕ ವ್ಯಾಜ್ಯಗಳ ಇತ್ಯರ್ಥಕ್ಕೆ ಅವಕಾಶ

ಯಾದಗಿರಿ: ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಬರುವ ಮಾ. 8 ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮರಿಯಪ್ಪ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯಾಲಯದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿದ ಅವರು, ಅಂದು ರಾಜಿಯಾಗಬಲ್ಲ ಅಪರಾಧಿಕ, ಬ್ಯಾಂಕ್ ವಸೂಲಾತಿ, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಪಟ್ಟ, ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿನ, ವಿದ್ಯುತ್ ನಿಯಂತ್ರಣ ಆಯೋಗ, ರಿಯಲ್ ಎಸ್ಟೇಟ್ ಪ್ರಾಧಿಕಾರಕ್ಕೆ ಸಂಬಂಧಪಟ್ಟ, ಸಾಲ ವಸೂಲಾತಿ ನ್ಯಾಯಾಧಿಕರಣ, ಚೆಕ್ಕು ಅಮಾನ್ಯ, ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣ, ಕಾರ್ಮಿಕ ವಿವಾದಗಳ, ಭೂಸ್ವಾಧೀನ, ವೇತನ ,ಭತ್ಯೆ,ಪಿಂಚಣಿ, ರಾಜಿಯಾಗಬಲ್ಲ ಸಿವಿಲ್ ಮತ್ತು ಇತರೇ ಹಾಗೂ ವೈವಾಹಿಕ-ಕುಟುಂಬ ನ್ಯಾಯಾಲಯ ಪ್ರಕರಣಗಳು ಸೇರಿದಂತೇ 18 ನಮೂನೆಯ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು ಈ ಲೋಕ್ ಅದಾಲತ್ ನಲ್ಲಿ ಬಗೆಹರಿಸಿಕೊಳ್ಳಬಹುದೆಂದು ಅವರು ಹೇಳಿದರು.
ಈಗ ಜಿಲ್ಲೆಯ ಕೋರ್ಟ್ ಗಳಲ್ಲಿ ಒಟ್ಟು 19,556 ಪ್ರಕರಣಗಳು ಇದ್ದು, ಈಗಾಗಲೇ ಲೋಕ್ ಅದಾಲತ್ ಗಾಗಿ 3820 ಪ್ರಕರಣಗಳು ರಾಜಿಯಾಗಬಹುದಾದ ಪ್ರಕರಣಗಳು ಎಂದು ಗುರುತಿಸಿದ್ದು, ಮಾ.7ರತನಕ ಇನ್ನೂ ಹೆಚ್ಚಿಗೆ ಅಂದರೇ 5000 ಪ್ರಕರಣಗಳು ಇಲ್ಲಿ ರಾಜಿ ಸಂಧಾನ ಮಾಡಲು ಯತ್ನಿಸಲಾಗುತ್ತಿದೆ.
ಇದಕ್ಕಾಗಿ ಈಗಾಗಲೇ ನಗರ ಸೇರಿದಂತೆ ಜಿಲ್ಲೆಯ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಕಸ ಎತ್ತುವ ವಾಹನಗಳಲ್ಲಿನ ಧ್ವನಿಮುದ್ರಿತ ಆಡಿಯೋ ಮೂಲಕ ಜನರಲ್ಲಿ ಈ ಕುರಿತು ಪ್ರಚಾರ ಮಾಡಲಾಗುತ್ತಿದೆ. ಮೂರು ಕಡೆ ಬ್ಯಾನರ್ ಕಟ್ಟುವ ಮೂಲಕ ಜನರಿಗೆ ಈ ಬಗ್ಗೆ ತಿಳಿಸಲಾಗುತ್ತಿದೆ ಎಂದು ನ್ಯಾಯಾಧೀಶ ಮರಿಯಪ್ಪ ವಿವರಿಸಿದರು.
ಕಳೆದ ಡಿ.14ರಂದು ನಡೆದ ಲೋಕ್ ಅದಾಲತ್ ನಲ್ಲಿ 4626 ಪ್ರಕರಣಗಳು ರಾಜಿ ಸಂಧಾನ ಮಾಡಲಾಗಿತ್ತು. ಇದೊಂದು ಕಡಿಮೆ ಖರ್ಚಿನಲ್ಲಿ ಶೀಘ್ರ ತಿರ್ಮಾನಕ್ಕಾಗಿ ಇರುವ ವಿಶೇಷ ಅವಕಾಶವಿದ್ದು, ಅರ್ಹರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಅವರು ಹೇಳಿದರು.