ಸಂವಿಧಾನಕ್ಕೆ ಬದ್ಧರಾಗಿ, ದೇಶಕ್ಕಾಗಿ ನಮ್ಮ ಕರ್ತವ್ಯ ನಿರ್ವಹಿಸೋಣ : ಶರಣಬಸಪ್ಪ ದರ್ಶನಾಪುರ
76ನೇ ಗಣರಾಜ್ಯೋತ್ಸವ ಆಚರಣೆ
![ಸಂವಿಧಾನಕ್ಕೆ ಬದ್ಧರಾಗಿ, ದೇಶಕ್ಕಾಗಿ ನಮ್ಮ ಕರ್ತವ್ಯ ನಿರ್ವಹಿಸೋಣ : ಶರಣಬಸಪ್ಪ ದರ್ಶನಾಪುರ ಸಂವಿಧಾನಕ್ಕೆ ಬದ್ಧರಾಗಿ, ದೇಶಕ್ಕಾಗಿ ನಮ್ಮ ಕರ್ತವ್ಯ ನಿರ್ವಹಿಸೋಣ : ಶರಣಬಸಪ್ಪ ದರ್ಶನಾಪುರ](https://www.varthabharati.in/h-upload/2025/01/26/1317976-539ab21e-8cfd-4b21-9a63-a55ab1614e90.webp)
ಯಾದಗಿರಿ : ಸಂವಿಧಾನಕ್ಕೆ ಬದ್ಧರಾಗಿ ನಮ್ಮ ಕರ್ತವ್ಯವನ್ನು ದೇಶ, ರಾಜ್ಯ ಹಾಗೂ ಜಿಲ್ಲೆಯ ಕೀರ್ತಿ ಹೆಚ್ಚಿಸಲು ಮುಡುಪಾಗಿಟ್ಟು, ಶ್ರಮಿಸೋಣ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿಂದು 76ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ವಿವಿಧ ಕವಾಯತು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಸಂವಿಧಾನದಿಂದಾಗಿ ಈ ದೇಶದ ಪ್ರತಿಯೊಬ್ಬ ಪ್ರಜೆಗೆ ಸಮಾನ ಅವಕಾಶ ದೊರೆತಿದೆ. ಇಂತಹ ಹೆಮ್ಮೆಯ ಸಂವಿಧಾನಕ್ಕೆ ಬದ್ಧರಾಗಿ ನಾವೆಲ್ಲರೂ ನಮ್ಮ ಕರ್ತವ್ಯವನ್ನು ಸಹ ಪ್ರಾಮಾಣಿಕವಾಗಿ ನಿರ್ವಹಿಸಬೇಕಾಗಿದೆ. ಈ ದೇಶದ, ರಾಜ್ಯದ ಮತ್ತು ಜಿಲ್ಲೆಯ ಕೀರ್ತಿಗಾಗಿ ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಭಾರತದ ಸಂವಿಧಾನವು 1949ರ ನವೆಂಬರ್ 26ರಂದು ಅಂಗೀಕಾರವಾಗಿ, ಜನವರಿ 26ರಂದು ಜಾರಿಗೆ ಬಂದಿದ್ದು, ಇದರ ಹಿನ್ನೆಲೆಯಲ್ಲಿ ಈ ದಿನವನ್ನು ಅತ್ಯಂತ ಗೌರವದಿಂದ ನಾವು ಆಚರಿಸುತ್ತಿದ್ದು, ಇದಕ್ಕಾಗಿ ಶ್ರಮಿಸಿದ ಸಂವಿಧಾನದ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಸದಾ ಸ್ಮರಿಸುವುದಾಗಿ ಅವರು ಹೇಳಿದರು.
ನಮ್ಮ ದೇಶದ ಅತ್ಯುನ್ನತ ಕಾನೂನು ಸಂವಿಧಾನವಾಗಿದೆ. ಸರ್ಕಾರವಾಗಲಿ, ಶ್ರೀಮಂತರಾಗಿರಲಿ, ಸಾಮಾನ್ಯ ಪ್ರಜೆ ಆಗಿರಲಿ ಸಂವಿಧಾನವನ್ನು ಮೀರಿ ನಡೆಯುವಂತಿಲ್ಲ. ನಮ್ಮ ಸಂವಿಧಾನದ ನೀತಿ, ನಿಯಮಗಳೆಲ್ಲವೂ ಸಮಾನವಾಗಿವೆ. ಸರ್ವಶ್ರೇಷ್ಠ, ಗೌರವಪೂರ್ಣವಾದ ನಮ್ಮ ಸಂವಿಧಾನ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ ಎಂದು ಹೇಳಿದರು.
ಭಾರತದ ಮೂಲ ಸಂವಿಧಾನವನ್ನು ಕೈಬರಹದಲ್ಲಿ ಬರೆಯಲಾಗಿದೆ. ಈವರೆಗೆ ಒಟ್ಟು 105 ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಲಾಗಿದೆ. ಈಗ ಸಂವಿಧಾನದಲ್ಲಿ 12 ಅನುಚ್ಛೇದಗಳು, 25 ಭಾಗಗಳು ಹಾಗೂ 470 ವಿಧಿಗಳಿವೆ ಎಂದು ಹೇಳಿದ ಅವರು, ನಮ್ಮ ಸಂವಿಧಾನಕ್ಕೆ ಹಾಗೂ ಈ ದೇಶಕ್ಕೆ ನಾವು ಸದಾ ಗೌರವಿಸೋಣ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದೇಶದ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ. ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹ ಜ್ಯೋತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಯುವನಿಧಿ ಯೋಜನೆಗಳಂತಹ ಪರಿಣಾಮಕಾರಿ ಯೋಜನೆಗಳನ್ನು ಜಾರಿಗೊಳಿಸಿ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. ವಿಶೇಷವಾಗಿ ಬಡ ಜನರಿಗೆ ಹಲವು ರೀತಿಯಲ್ಲಿ ನೆರವಾಗಿರುವ ಸರ್ಕಾರ ಈ ಯೋಜನೆಗಳಿಗಾಗಿ 65,000 ಕೋ.ರೂಗಳನ್ನು ಈವರೆಗೆ ವ್ಯಯ ಮಾಡಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಯ ದೃಷ್ಟಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 5000 ಕೋ. ರೂಗಳನ್ನು ಮಂಜೂರು ಮಾಡುವ ಮೂಲಕ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಗಮನ ನೀಡಿದೆ. ಡಾ. ಮಲ್ಲಿಕಾರ್ಜುನ್ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿಗಳಾಗಿದ್ದ ಧರ್ಮಸಿಂಗ್ ಅವರ ನಿರಂತರ ಪ್ರಯತ್ನದ ಫಲವಾಗಿ 371 (ಜೆ) ಜಾರಿಗೊಂಡು ಈ ಭಾಗದ ಉದ್ಯೋಗ ಮತ್ತು ಶಿಕ್ಷಣದ ಸಮಸ್ಯೆ ನಿವಾರಣೆಯಾಗಿ, ಪ್ರಗತಿ ಸಾಧಿಸಲು ನೆರವಾಗಿದೆ. ವಿಶೇಷವಾಗಿ ನಿರುದ್ಯೋಗಿ ಯುವ ಜನಾಂಗಕ್ಕೆ ಹಲವು ರೀತಿಯಲ್ಲಿ ಇದು ನೆರವಾಗಿದೆ ಎಂದು ಅವರು ಹೇಳಿದರು.
ಶಾಸಕರಾದ ಚನ್ನಾರಡ್ಡಿ ಪಾಟೀಲ್ ತುನ್ನೂರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನಾಯಕ ಮಾಲಿಪಾಟೀಲ್, ನಗರಸಭೆ ಅಧ್ಯಕ್ಷ ಲಲಿತಾ ಅನಪುರ, ಪ್ರಭಾರಿ ಜಿಲ್ಲಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಸಹಾಯಕ ಆಯುಕ್ತರಾದ ಹಂಪಣ್ಣ ಸಜ್ಜನ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
-ಮಕ್ಕಳ ದೇಶಭಕ್ತಿ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು.