ಯಾದಗಿರಿ: ಬಸ್ ಸಮಸ್ಯೆ ವಿರುದ್ಧ ವಿದ್ಯಾರ್ಥಿಳಿಂದ ರಸ್ತೆ ತಡೆದು ಪ್ರತಿಭಟನೆ
ಯಾದಗಿರಿ/ ಸುರಪುರ: ಸರಿಯಾದ ಸಮಯಕ್ಕೆ ಬಸ್ ಬರದೆ ತುಂಬಾ ತೊಂದರೆ ಉಂಟಾಗುತ್ತಿದೆ ಎಂದು ಆರೋಪಿಸಿ ಮಾದಿಗ ಯುವ ಸೇನೆ ರಾಜ್ಯಾಧ್ಯಕ್ಷ ಹಾಗೂ ವಕೀಲ ನಂದಕುಮಾರ ಕನ್ನೆಳ್ಳಿ ನೇತೃತ್ವದಲ್ಲಿ ನಗರದ ಕುಂಬಾರಪೇಟ ವೃತ್ತದಲ್ಲಿ ರಸ್ತೆ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾದಿಗ ಯುವ ಸೇನೆ ರಾಜ್ಯಾಧ್ಯಕ್ಷ ನಂದಕುಮಾರ ಅವರು,ಕಳೆದ ಅನೇಕ ತಿಂಗಳುಗಳಿಂದ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಬಾರದೆ ಇರುವುದರಿಂದ ವಿದ್ಯಾರ್ಥಿಗಳಿಗೆ ನಿತ್ಯವು ಶಾಲಾ-ಕಾಲೇಜುಗಳಿಗೆ ಹೋಗಲು ತೊಂದರೆ ಪಡುವಂತಾಗಿದೆ. ಹತ್ತನೆ ತರಗತಿ ವಿದ್ಯಾರ್ಥಿಗಳು ನಿತ್ಯವು ಶಾಲೆಗೆ ತಡವಾಗಿ ಹೋಗುವುದರಿಂದ ಓದಿನ ಮೇಲೆ ದೊಡ್ಡ ಪರಿಣಾಮವುಂಟಾಗಿದೆ. ಆದರೆ ಸಾರಿಗೆ ಇಲಾಖೆಗೆ ವಿದ್ಯಾರ್ಥಿಗಳ ತೊಂದರೆ ಕಾಣದಿರುವುದು ತುಂಬಾ ಬೇಸರದ ಸಂಗತಿಯಾಗಿದೆ,ಬೇಸತ್ತು ಇಂದು ರಸ್ತೆ ತಡೆದು ಪ್ರತಿಭಟನೆ ಮಾಡುತ್ತಿದ್ದು,ಕೂಡಲೇ ಸಮಸ್ಯೆ ಪರಿಹರಿಸದಿದ್ದಲ್ಲಿ ಬಸ್ ಡಿಪೋ ಮುಂದೆ ರಸ್ತೆ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಸುರಪುರ ಠಾಣೆ ಪಿ.ಐ ಆನಂದ ವಾಗಮೊಡೆ, ಪಿಎಸ್‌ಐ ಶರಣಪ್ಪ ಹವಾಲ್ದಾರ್ ಮತ್ತು ಸಿಬ್ಬಂದಿಗಳು ಆಗಮಿಸಿ ಮನವೊಲಿಸುವ ಪ್ರಯತ್ನ ಮಾಡಿದರು ಪ್ರತಿಭಟನೆ ನಿಲ್ಲಿಸದಿದ್ದಾಗ ಬಸ್ ಡಿಪೋ ಮ್ಯಾನೆಜರ್ ಆಗಮಿಸಿ ಸರಿಯಾದ ಸಮಯಕ್ಕೆ ಬಸ್ ಓಡಿಸುವುದಾಗಿ ಭರವಸೆ ನೀಡಿದ ನಂತರ ರಸ್ತೆ ತಡೆ ನಿಲ್ಲಿಸಲಾಯಿತು. ಅರ್ಧಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ಮಾಡಿದ್ದರಿಂದ ವಾಹನ ಸವಾರರು ಪರದಾಡಿದರು. ಈ ಸಂದರ್ಭದಲ್ಲಿ ಅನೇಕ ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು.