ಸುರಪುರ | ಬಣಗಾರ ಫೌಂಡೇಶನ್ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ ; ಸಾಧಕರಿಗೆ ಸನ್ಮಾನ
ಮಹಿಳೆಯರ ಮೇಲಿನ ಶೋಷಣೆಗಳು ನಿಲ್ಲಬೇಕು : ಸಂಧ್ಯಾ ಹೊನಗುಂಟಿಕರ್

ಸುರಪುರ : ಇತ್ತೀಚಿನ ದಿನಮಾನಗಳಲ್ಲಿ ಮಹಿಳೆಯರ ಮೇಲಿನ ಶೋಷಣೆ ಹೆಚ್ಚುತ್ತಿವೆ ಇದು ನಿಲ್ಲಬೇಕು ಎಂದು ಖ್ಯಾತ ಸಾಹಿತಿ ಸಂಧ್ಯಾ ಹೊನಗುಂಟಿಕರ್ ಮಾತನಾಡಿದರು.
ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಬಣಗಾರ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಾಧಕ ಮಹಿಳೆಯರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆ ಎಲ್ಲಾ ರಂಗಗಳಲ್ಲಿ ಸಾಧನೆ ಮಾಡುತ್ತಿದ್ದಾಳೆ, ಆದರೆ ಹೆಣ್ಣಿನ ಶೋಷಣೆ ಎನ್ನುವುದು ದಿನ ನಿತ್ಯ ನಡೆಯುತ್ತಿದೆ, ಮಹಿಳೆಯರು ಜಾಗೃತರಾಗುವವರೆಗೆ ಇದು ನಿಲ್ಲುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ಜಯಲಲಿತಾ ಪಾಟೀಲ್ ಮಾತನಾಡಿ, ಅಂತರ್‌ರಾಷ್ಟ್ರೀಯ ಮಹಿಳಾ ದಿನವನ್ನು ಮಹಿಳೆಯರು ಆಚರಣೆ ಮಾಡುವುದು ಮುಖ್ಯವಲ್ಲ ಪುರುಷರು ಇಂತಹ ದಿನವನ್ನು ಆಚರಿಸಬೇಕು, ಅದನ್ನು ಬಣಗಾರ ಫೌಂಡೇಶನ್ ಮೂಲಕ ಪ್ರಕಾಶ ಬಣಗಾರ ಮಾಡುತ್ತಿದ್ದಾರೆ ತುಂಬಾ ಸಂತೋಷದ ಸಂಗತಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಾಹಿತಿಗಳಾದ ಪಾರ್ವತಿ ಎಸ್.ಬೂದೂರು, ಹುಣಸಗಿಯ ಸಾಹಿತಿ ಶಿವಲೀಲಾ ಮುರಾಳ,ಸಾಹಿತಿ ಜ್ಯೋತಿ ದೇವಣಗಾವ್,ಸುರಕ್ಷಾ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಸುನಂದಾ ನಾಲವಾರ,ಪತಂಜಲಿ ಯೋಗ ಸಮಿತ ವಿಜಯಪುರದ ವಿಮಲಾಕ್ಷೀ ಸಿಂದಗಿ,ನಿವೃತ್ತ ಉಪನ್ಯಾಸಗಿ ಶಕುಂತಲಾ ಜಾಲವಾದಿ ಮಾತನಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ರೇಣುಕಾ ನಿಂಗಣ್ಣ ನಾಯಕ,ಅನ್ನಪೂರ್ಣ ಸಾಂಗೋಲಿ,ಬಸವರಾಜೇಶ್ವರಿ ಹೂಗಾರ,ಮಹಾದೇವಮ್ಮ ಶಂಕ್ರಪ್ಪ ಬಣಗಾರ,ರಮಾ ಆನಂದ ಬಾರಿಗಿಡದ,ಪ್ರೇಮಾ ಮಲ್ಲು ಬಾದ್ಯಾಪುರ ಉಪಸ್ಥಿತರಿದ್ದರು.
ವಿವಿಧ ರಂಗಗಳ ಸಾಧಕಿಯರಾದ ಶಿಕ್ಷಣ ಕ್ಷೇತ್ರದಲ್ಲಿ ಗೌರಮ್ಮ, ಶಕೀಲಾಬೇಗಂ ಕೆಂಭಾವಿ, ಸಾಮಾಜಿಕ ಕ್ಷೇತ್ರದಲ್ಲಿ ಚಾಂದಬೀ ಸೂಲಗಿತ್ತಿ ವಾಗಣಗೇರ, ಅಂಬಿಕಾ ಚವ್ಹಾಣ ಸುರಪುರ,ರೇಣುಕಾ ಪಾಟೀಲ್ ಗೋನಾಲ, ಸಹಕಾರ ಕ್ಷೇತ್ರದಲ್ಲಿ ಪ್ರೇಮಾ ಪೊಲೀಸ್ ಪಾಟೀಲ್, ಸಂಗೀತ ಕ್ಷೇತ್ರದಲ್ಲಿ ಮೇಘನಾ ಹಳಿಸಗರ, ಯೋಗಪಟು ಮೇಘಾ ಭಜಂತ್ರಿ ಹುಣಸಗಿ ಹಾಗೂ ಬಸವೇಶ್ವರ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ನೀಲಮ್ಮ ಆರ್.ಕುಂಬಾರ, ಅರ್ಬನ್ ಕ್ರೇಡಿಟ್ ಕೋ ಆಪರೇಟಿವ್ ಸೊಸಾಯಿಟಿ ನಿರ್ದೇಶಕಿ ಚವ್ವಾ ಲಕ್ಷ್ಮೀ ಪದ್ಮಾವತಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಹಿಳೆಯರು ಶ್ರೀರಾಮನಂತ ಗಂಡ ಇರಬೇಕು ಎನ್ನುತ್ತಾರೆ, ಆದರೆ ಶ್ರೀರಾಮ ಪತ್ನಿ ಸೀತೆ ತುಂಬು ಗರ್ಭೀಣಿಯಾಗಿದ್ದರು ಯಾರೋ ಒಬ್ಬ ವ್ಯಕ್ತಿಯ ಮಾತಿಗಾಗಿ ಕಾಡಿಗೆ ಹೋಗಿ ಬಿಟ್ಟು ಬಂದಿದ್ದಾರೆ. ಅವರು ಒಬ್ಬ ಮಹಿಳಾ ಶೋಷಕ, ಕೃಷ್ಣನಾದರು ಹತ್ತಾರು ಮಹಿಳೆಯರಿಗೆ ಪ್ರೀತಿ ಕೊಟ್ಟಿದ್ದ, ಆದರೆ ಶ್ರೀರಾಮ ಶೋಷಣೆ ಮಾಡಿದ್ದಾರೆ.
-ಜಯಲಲಿತಾ ಪಾಟೀಲ್ ನ್ಯಾಯವಾದಿ ಸುರಪುರ
ಮಹಿಳೆಯರ ಮೇಲಿನ ಶೋಷಣೆ ನಿಲ್ಲಬೇಕಾದರೆ ಮೊದಲು ಪುರುಷರಲ್ಲಿ ಜಾಗೃತಿ ಬರಬೇಕಿದೆ. ನಮ್ಮ ಸಾಫ್ಟವೇರ್ ಕಂಪನಿಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಶೋಷಣೆ ತಡೆಗಾಗಿ ಸಮಿತಿ ರಚಿಸಿರುತ್ತಾರೆ. ಬರೀ ಮಹಿಳೆಯರು ಸಮಿತಿಯಲ್ಲಿ ಇರುತ್ತಿದ್ದರು. ಇದರಲ್ಲಿ ಪುರುಷರು ಇರಬೇಕೆಂದು ಪ್ರಶ್ನಿಸಿದ ನಂತರ ಈಗ ಪುರುಷರನ್ನು ಸಮಿತಿಯಲ್ಲಿ ನೇಮಿಸಲಾಗಿದೆ.
- ಬಸಮ್ಮ ಹೇರುಂಡಿ ಸಾಫ್ಟವೇರ್ ಇಂಜಿನಿಯರ್ ರಸ್ತಾಪುರ
ಪತ್ರಿಕೆಗಳಲ್ಲಿ ನಿಧನ ವಾರ್ತೆ ಕಾಲಂ ಇರುವಂತೆ ಮುಂದಿನ ದಿನಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರಗಳ ಸುದ್ದಿಗಾಗಿ ಕಾಲಂ ಬರಬಹುದೇನೊ. ನಿತ್ಯವು ಪತ್ರಿಕೆಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರದ ಸುದ್ದಿಗಳು ನೋಡಲು ಬೇಸರವಾಗುತ್ತದೆ.
- ಸಂಧ್ಯಾ ಹೊನಗುಂಟಿಕರ್ ಸಾಹಿತಿಗಳು ಕಲಬುರಗಿ