ಸುರಪುರ | ಅಭಿವೃದ್ಧಿ ಕಾಮಗಾರಿಗಳಿಗಾಗಿ ಅನುದಾನ ತರಲು ಎಲ್ಲ ಪ್ರಯತ್ನ ಮಾಡುವೆ : ಆರ್.ವಿ.ನಾಯಕ
ಯಾದಗಿರಿ : ಸುರಪುರ ನಗರದ ಸಮಗ್ರ ಅಭಿವೃದ್ದಿಗಾಗಿ ತಾವೆಲ್ಲರೂ ಸಹಕಾರ ನೀಡಬೇಕು, ಸಚಿವ ಭೈರತಿ ಸುರೇಶ ಅವರನ್ನು ಭೇಟಿ ಮಾಡಿ ಅನುದಾನ ತರಲು ಎಲ್ಲ ಪ್ರಯತ್ನ ಮಾಡುವುದಾಗಿ ಶಾಸಕ ರಾಜಾ ವೇಣುಗೋಪಾಲ್ ನಾಯಕ್ ತಿಳಿಸಿದ್ದಾರೆ.
ನಗರಸಭೆಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ದೂರು ಬಂದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ನಗರಸಭೆ ವ್ಯಾಪ್ತಿಯಲ್ಲಿ ಅಭಿವೃದ್ದಿಯಂತೆ ಕರ ವಸೂಲಿಗೂ ಒತ್ತು ನೀಡಬೇಕು, ಕರ ನೀಡುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು, ಅಲ್ಲದೆ ಎಲ್ಲಾ ಆಸ್ತಿ ನೊಂದಣಿ ಡಿಜಿಟಲಿಕರಣ ಮಾಡುವಂತೆ ಸೂಚಿಸಿದರು.
ನಗರದ ರಂಗಂಪೇಟೆಯಲ್ಲಿ ಮಾಜಿ ರಾಷ್ಟ್ರಪತಿ ಡಾ.ಎಪಿ.ಜೆ ಅಬ್ದುಲ್ ಕಲಾಂ ಅವರ ಪ್ರತಿಮೆ ನಿರ್ಮಾಣದ ಕುರಿತು ಮಾತನಾಡಿ, ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರು ಯಾವುದೇ ಒಂದು ಜಾತಿ ಧರ್ಮಕ್ಕೆ ಸೀಮಿತವಾದ ವ್ಯಕ್ತಿಯಲ್ಲ, ಅವರು ಎಲ್ಲ ಯುವಕರಿಗೆ ಮಾದರಿಯಾಗಿದ್ದಾರೆ, ಅವರ ಪ್ರತಿಮೆಯನ್ನು ಆದಷ್ಟು ಶೀಘ್ರದಲ್ಲಿ ನಿರ್ಮಾಣ ಮಾಡುವಂತೆ ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷೆ ಹೀನಾ ಕೌಸರ್ ಶಕೀಲ್ ಅಹ್ಮದ್ ಖುರೇಷಿ ವಹಿಸಿದ್ದರು. ಉಪಾಧ್ಯಕ್ಷ ರಾಜಾ ಪಿಡ್ಡ ನಾಯಕ (ತಾತಾ), ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಉಪಸ್ಥಿತರಿದ್ದರು.
ನಗರಸಭೆಯ ಎಲ್ಲ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು, ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ, ಎಇಇ ಶಾಂತಪ್ಪ, ನಿರಂತರ ಕುಡಿಯುವ ನೀರು ಸರಬರಾಜು ಇಲಾಖೆ ಜೆಇ ಶಂಕರಗೌಡ ಉಪಸ್ಥಿತರಿದ್ದರು.