ಯಾದಗಿರಿ | ಡರೋಡೆ ಪ್ರಕರಣ; ಮೂವರು ಆರೋಪಿಗಳ ಬಂಧನ, 4 ಲಕ್ಷ ರೂ. ವಶಕ್ಕೆ

ಯಾದಗಿರಿ: ದನಗಳ ಸಂತೆಗಾಗಿ ಬಂದಿದ್ದವರ ಬಳಿ ಲಕ್ಷಾಂತರ ರೂ.ಹಣ ದೋಚಿದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ತಿಳಿಸಿದರು. ತೆಲಂಗಾಣದ ಸೂರ್ಯಪೇಟ ಪಟ್ಟಣದಿಂದ ಕಳೆದ ಜ.3 ರಂದು ಶಹಾಪುರದ ದನಗಳ ಸಂತೆಗೆ ಬಂದಿದ್ದ ವ್ಯಾಪಾರಿಗಳ ಮೇಲೆ ತಾಲೂಕಿನ ಚಟ್ನಳ್ಳಿ ಕ್ರಾಸ್ ಬಳಿ ಗಾಜಿನ ಬಾಟಲ್ ಗಳಿಂದ ದಾಳಿ ನಡೆಸಿ 4 ಲಕ್ಷ ರೂ.ಗಳನ್ನು ಕಸಿದುಕೊಂಡು ಆರೋಪಿಗಳು ಪರಾರಿಯಾಗಿದ್ದರು. ವಡಿಗೇರಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿತ್ತು.
ಘಟನೆ ಸಂಬಂಧ ಪೊಲೀಸರು ಜ.21 ರಂದು ರಾಯಚೂರಿನಲ್ಲಿ ಮೂವರನ್ನು ಬಂಧಿಸಿ ಅವರಿಂದ 4 ಲಕ್ಷ ರೂ. ವಶಕ್ಕೆ ಪಡೆದಿದ್ದಾರೆ. ಲಿಂಗಸೂಗುರಿನ ಯಲ್ಲಪ್ಪ, ಕೃಷ್ಣ ಮತ್ತು ದೇವದುರ್ಗದ ಸಿದ್ದರಾಮಪ್ಪ ಬಂಧಿತ ಆರೋಪಿಗಳು.
ಪ್ರಕರಣದ ಇನ್ನುಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ತಂಡದ ಕೆಲವರ ಮೇಲೆ ರಾಜ್ಯದ 21 ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ನಗರದ ಪ್ರಮುಖ 24 ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಸಿದ್ಧತೆ ನಡೆದಿದ್ದು, ಈ ಹಿಂದೆ 55 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಆದರೆ ಹೆಚ್ಚಿನ ಹಣದ ಅವಶ್ಯಕತೆ ಇದ್ದ ಕಾರಣ ಕೆಕೆಆರ್ ಡಿಬಿಯಿಂದ ಮತ್ತೆ 15 ಲಕ್ಷ ಬಿಡುಗಡೆಯಾಗಿದೆ. ಒಟ್ಟು 70 ಲಕ್ಷ ರೂ. ಗಳ ವೆಚ್ಚದಲ್ಲಿ ವಿವಿಧ ಕಡೆ 83 ಸಿಸಿ ಕ್ಯಾಮರಾಗಳ ಅಳವಡಿಕೆಗೆ ಟೆಂಡರ್ ಕರೆಯಲಾಗಿದೆ.
ಪೃಥ್ವಿಕ್ ಶಂಕರ್ ಎಸ್ಪಿ, ಯಾದಗಿರಿ