ಪದವಿ ಪರೀಕ್ಷೆ: ಗಿರಿ ಜಿಲ್ಲೆಗೆ ದೊರೆತ ಎರಡು ಬಂಗಾರದ ಪದಕ
ಯಾದಗಿರಿ: ನಗರದ ಲಿಂಗೇರಿ ಕೋನಪ್ಪ ಶಿಕ್ಷಣ ಸಂಸ್ಥೆಯ ಮಹಿಳಾ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಜರುಗಿದ ಪದವಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಬಿಎಸ್.ಸಿ ಅಂತಿಮ ಪದವಿ ಪರೀಕ್ಷೆಯಲ್ಲಿ ಭೌತಶಾಸ್ತ್ರ ವಿಷಯದಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆಯುವದರೊಂದಿಗೆ ಖದಿಜಾತುಲ್ ಕುಬ್ರಾ ಈ ವಿದ್ಯಾರ್ಥಿನಿಯು ಭೌತಶಾಸ್ತ್ರ ವಿಷಯಕ್ಕೆ ಇರುವ ಬಂಗಾರದ ಪದಕವನ್ನು ಪಡೆದುಕೊಂಡಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷರಾದ ರುದ್ರಪ್ಪ ನಾಡಗೌಡ ಅವರು ಹರ್ಷ ವ್ಯಕ್ತಪಡಿಸಿದರು.
ಮತ್ತೋರ್ವ ವಿದ್ಯಾರ್ಥಿನಿಯಾದ ಅಂಕಿತಾ ಮೇತ್ರೆ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದು ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ ಕೊಡಲ್ಪಡುವ ಬಂಗಾರದ ಪದಕವನ್ನು ಪಡೆದುಕೊಂಡಿದ್ದಾರೆ. ಈ ಪ್ರಶಸ್ತಿ ಪ್ರಧಾನ ಸಮಾರಂಭವು ಕರ್ನಾಟಕ ರಾಜ್ಯ ಅಕ್ಕ ಮಾಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 16ನೇ ಘಟಿಕೋತ್ಸವ ಸಮಾರಂಭದಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿದ ಉಪಕುಲಪತಿಗಳಾದ ಡಾ.ತುಳಸಿ ಮಾಲಾ ಮತ್ತು ಶೈಕ್ಷಣಿಕ ವಿಭಾಗದ ಕುಲ ಸಚಿವರಾದ ಸೋಮಶೇಖರ ಸೊಮನಾಳ್ ಮತ್ತು ಪರೀಕ್ಷಾ ವಿಭಾಗದ ಕುಲಸಚಿವರಾದ ಡಾ. ಚಂದ್ರಶೇಖರ ಇವರುಗಳು ಬಂಗಾರದ ಪದಕವನ್ನು ಪ್ರಧಾನ ಮಾಡಿದರು.
ಮಹಿಳೆಯರಿಗೆ ಉತ್ತಮ ಗುಣಮಟ್ಟದ ಮತ್ತು ಕೌಶಲ್ಯಾಧರಿತ ಶಿಕ್ಷಣವನ್ನು ನೀಡಿ ಮಹಿಳಾ ಪ್ರಗತಿಗಾಗಿ ನಮ್ಮ ಸಂಸ್ಥೆ ಸದಾ ಶ್ರಮಿಸುತ್ತದೆ ಎಂದು ಅಧ್ಯಕ್ಷರಾದ ರುದ್ರಪ್ಪ ನಾಡಗೌಡ ತಿಳಿಸಿದರು.