ಯಾದಗಿರಿ | ಡಾ.ಅಂಬೇಡ್ಕರ್ ದೇಶದ ಅಸ್ಮಿತೆ : ಅಮೀನರಡ್ಡಿ
ಯಾದಗಿರಿ : ಕಾಂಗ್ರೆಸ್ ನವರು ದೇಶವನ್ನು ಆಳುವ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನ ಮಾಡಿ, ಹೀನಾಯವಾಗಿ ನಡೆಸಿಕೊಂಡಿದ್ದಾರೆ ಎಂದು ಬಿಜೆಪಿ ಜಿಲ್ಲಾದ್ಯಕ್ಷ ಅಮೀನರಡ್ಡಿ ಯಾಳಗಿ ಆರೋಪಿಸಿದರು.
ಡಾ.ಬಾಬಾ ಸಾಹೇಬರು ನೆಹರು ಪ್ರಧಾನಿಯಾಗಿದ್ದಾಗ ಪತ್ರವೊಂದು ಬರೆದು, ಈ ದೇಶದಲ್ಲಿ ಪರಿಶಿಷ್ಟ ಜಾತಿ ಜನತೆ ಅನುಭವಿಸಿದಷ್ಟು ಯಾತನೆ ಮತ್ಯಾರು ಅನುಭವಿಸಿಲ್ಲ. ಆದರೆ, ನೀವು ಅಲ್ಪಸಂಖ್ಯಾತರನ್ನು ಅತೀಯಾಗಿ ಓಲೈಕೆ ಮಾಡುತ್ತಿದ್ದೀರಿ ಎಂದು ಉಲ್ಲೇಖಿಸುತ್ತಾರೆ. ಆದರೆ, ಕಾಂಗ್ರೆಸ್ ಆ ಪತ್ರವನ್ನು ಇದುವರೆಗೂ ಯಾಕೆ ಬಹಿರಂಗ ಪಡಿಸಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
ಕಾಂಗ್ರೆಸ್ ಹಾಗೂ ವಿಶೇಷವಾಗಿ ಗಾಂಧಿ ಕುಟುಂಬ ತಮಗೆ ತಾವೇ ಭಾರತ ರತ್ನ ಪ್ರಶಸ್ತಿ ನೀಡಿಕೊಂಡಿದೆ. ಬಾಬಾ ಸಾಹೇಬರಿಗೆ ಭಾರತ ರತ್ನ ನೀಡಲಿಲ್ಲ. ಸ್ವತಃ ಅವರನ್ನು ಚುನಾವಣೆಯಲ್ಲಿ ಸೋಲಿಸಲು ಎಲ್ಲ ರೀತಿಯ ಪ್ರಯತ್ನ ಮಾಡಿದ್ದಾರೆ. ಮೊನ್ನೆ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಡಿದ ಮಾತುಗಳನ್ನು ಕಾಂಗ್ರೆಸ್ ತಿರುಚಿ ದೇಶದ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಕಿಡಿಕಾರಿದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಡಾ.ಅಂಬೇಡ್ಕರ್ ಅವರಿಗೆ ಸಾಕಷ್ಟು ಗೌರವ ಸಲ್ಲಿಸಿದೆ. ಬಾಬಾ ಸಾಹೇಬರು ಈ ದೇಶದ ಅಸ್ಮಿತೆಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ, ಅಲೆಮಾರಿ ಅರೆ ಅಲೆಮಾರಿ ನಿಗಮದ ಅಧ್ಯಕ್ಷ ದೇವಿಂದ್ರನಾಥ ನಾದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ, ಜಿಲ್ಲಾ ವಕ್ತಾರ ಹಣಮಂತ ಇಟಗಿ, ಜಿಲ್ಲಾ ಮಾಧ್ಯಮ ಸಂಚಾಲಕ ವಿರುಪಾಕ್ಷಪ್ಪ ಸ್ವಾಮಿ ಹೆಡಗಿಮದ್ರಾ,ಸಹ ಸಂಚಾಲಕ ಚಂದ್ರಶೇಖರ ಕಡೆಸೂರ ಇದ್ದರು.