ಯಾದಗಿರಿ | ಅಂಗನವಾಡಿ ಕಾರ್ಯಕರ್ತರನ್ನು ಖಾಯಂಗೊಳಿಸಲು ಅಹೋರಾತ್ರಿ ಧರಣಿ
ಯಾದಗಿರಿ : ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ಕಾಯಂ ಮಾಡಬೇಕು. ಗ್ರ್ಯಾಚ್ಯುಟಿ ಹಣ ಬಿಡುಗಡೆ, ಗೌರವಧನ 15 ಸಾವಿರ ರೂ. ಹೆಚ್ಚಿಸಬೇಕು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಂಗನವಾಡಿ ನೌಕರರು ಅಹೋರಾತ್ರಿ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಅನೀತಾ ಹಿರೇಮಠ ಮಾತನಾಡಿ, ಅಂಗನವಾಡಿ ನೌಕರರು ನಿವೃತ್ತಿಯಾದವರಿಗೆ ಮಾಸಿಕ 10 ಸಾವಿರ ರೂ. ಪಿಂಚಣಿ ನೀಡಬೇಕು. ಎಲ್ಲ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಎಲ್ಕೆಜಿ, ಯುಕೆಜಿ ಪ್ರಾರಂಭಿಸಬೇಕು. ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಪ್ರತ್ಯೇಕ ಇಲಾಖೆ ಆಗಬೇಕು. ಖಾಲಿ ಹುದ್ದೆಗಳಿಗೆ 3 ತಿಂಗಳೊಳಗೆ ನೇಮಕಾತಿ ಮಾಡಬೇಕು, ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ವರ್ಗ 3 ಮತ್ತು 4 ಎಂದು ಪರಿಗಣಿಸಿ ಖಾಯಂ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಗೌರವಾಧ್ಯಕ್ಷರಾದ ಸುರೇಖಾ ಕುಲಕರ್ಣಿ, ಜಿಲ್ಲಾ ಕಾರ್ಯದರ್ಶಿ ಬಸಲಿಂಗಮ್ಮ ನಾಟೇಕಾರ, ಜಿಲ್ಲಾ ಖಜಾಂಚಿ ಬಸಮ್ಮ ಆಲ್ಟಾಳ, ನಸೀಮಾ, ಇಂದಿರಾ, ಚಂದಮ್ಮ, ಮಹಾದೇವಿ, ಯಮುನಮ್ಮ ಲಕ್ಷ್ಮೀ, ರಾಧಾ, ಕವಿತಾ ನಾಟೇಕಾರ, ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದರು.