ಯಾದಗಿರಿ | ಸರಕಾರಿ ನೌಕರರ ಚುನಾವಣೆಯಲ್ಲಿ ಉಸ್ತುವಾರಿ ಸಚಿವರ ಆಪ್ತರಿಂದ ಹಸ್ತಕ್ಷೇಪ ಆರೋಪ
ಯಾದಗಿರಿ : ಡಿ.4ರಂದು ನಡೆಯಲಿರುವ ಸರಕಾರಿ ನೌಕರರ ಜಿಲ್ಲಾಧ್ಯಕ್ಷರ ಹಾಗೂ ಪದಾಧಿಕಾರಿಗಳ ಚುನಾವಣೆಗೆ ಮತದಾನ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಬೆಂಬಲಿಗರಿಂದ ಬೆದರಿಕೆ ಹಾಗೂ ಕಣದಲ್ಲಿರುವ ಅಭ್ಯರ್ಥಿಗಳು ಚುನಾವಣೆಯಲ್ಲಿ ಮತಯಾಚನೆ ಮಾಡದಂತೆ ದಿಗ್ಭಂದನ ಹೂಡಿದ್ದಾರೆ ಎಂದು ತಿಳಿದುಬಂದಿದೆ ಎಂದು ಕರ್ನಾಟಕ ಜನಸೇನಾ ಸಂಸ್ಥಾಪಕ ಅಧ್ಯಕ್ಷ ಎಂ.ಎಂ.ಜಾಗೀರದಾರ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಚಿವರ ಬೆಂಬಲಿಗರೇ ಅಧ್ಯಕ್ಷ ಸ್ಥಾನ ಪಡೆಯಬೇಕು ಎಂಬ ಉದ್ದೇಶದಿಂದ ಸಾಮಾನ್ಯ ಸರಕಾರಿ ನೌಕರರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದರಿಂದ ಕೆಲವು ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸ್ ಪಡೆದಿದ್ದು, ಅಲ್ಲದೇ ಉಳಿದ ಅಭ್ಯರ್ಥಿಗಳಿಗೆ ಮತಯಾಚನೆ ಮಾಡದಂತೆ ಕಣದಿಂದ ಸ್ವ ಇಚ್ಚೆಯಿಂದ ನಿವೃತ್ತಿ ಪಡೆದು ಲಿಖಿತ ರೂಪದಲ್ಲಿ ಕೊಡಲು ತಾಕೀತು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಸರಕಾರಿ ನೌಕರರ ಜಿಲ್ಲಾಧ್ಯಕ್ಷರ ಹಾಗೂ ಪದಾಧಿಕಾರಿಗಳ ಆಯ್ಕೆ ಚುನಾವಣೆಗೆ ಹಲವಾರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಸಚಿವರ ಬೆಂಬಲಿಗರು ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಹಿಂಪಡೆಯಬೇಕು ಎಂದು ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಜನ ಸಾಮಾನ್ಯರ ಸಮಸ್ಯೆ ಆಲಿಸಿ ಅವರ ಸಮಸ್ಯೆಗಳನ್ನು ಪರಿಹರಿಸಿ ಸಾಮಾಜಿಕ ನ್ಯಾಯ ನೀಡಬೇಕಾಗಿರುವ ಸಚಿವರ ಬೆಂಬಲಿಗರ ಬೆಳವಣಿಗೆ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಖಂಡಿಸಿದ್ದಾರೆ.