ಯಾದಗಿರಿ | ಜಲಜೀವನ್ ಮಿಷನ್ ಯೋಜನೆಯಲ್ಲಿ ಕಳಪೆ ಕಾಮಗಾರಿ ಆರೋಪ : ಕ್ರಮಕ್ಕೆ ಆಗ್ರಹ
ಯಾದಗಿರಿ : ಸುರಪುರ ತಾಲ್ಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿನ ಕಾಮಗಾರಿಗಳು ಕಳಪೆಯಾಗಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಲಕ್ಷ್ಮೀನಾರಾಯಾಣ ನಾಗವಾರ ಬಣದ ಮುಖಂಡರು ಒತ್ತಾಯಿಸಿದರು.
ನಗರದ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪ ವಿಭಾಗದ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿ, ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ನಿರ್ಮಿಸಲಾಗುತ್ತಿರುವ ಜಲಜೀವನ ಮಿಷನ್ ಯೋಜನೆಯ ಕಾಮಗಾರಿಗಳು ಅರ್ಧಂಬರ್ಧ ಕಾಮಗಾರಿ ಮಾಡಿ ಹಣ ಲಪಟಾಯಿಸಲಾಗಿದೆ. ಅಲ್ಲದೆ ಅನೇಕ ಕಡೆಗಳಲ್ಲಿ ಪೈಪ್‍ಲೈನ್ ಮಾಡಿಲ್ಲ,ಅನೇಕ ಗ್ರಾಮಗಳಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಮಾಡಿಲ್ಲ, ಆದರೆ ಬಿಲ್ ಮಾತ್ರ ಪಾವತಿಸಲಾಗಿದೆ. ಆದ್ದರಿಂದ ಇಂತಹ ಕಳಪೆ ಕಾಮಗಾರಿಗೆ ಕಾರಣರಾದ ಜೆ.ಇ ಅವರ ಮೇಲೆ ಅಮಾನತುಗೊಳಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ನಂತರ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಉಪ ವಿಭಾಗದ ಎಇಇ ಅವರಿಗೆ ಬರೆದ ಮನವಿಯನ್ನು ಕಚೇರಿ ಸಿರಸ್ತೆದಾರರ ಮೂಲಕ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ವಾಗಣಗೇರಾ,ತಾಲ್ಲೂಕು ಸಂಚಾಲಕ ಮಾನಪ್ಪ ಶೆಳ್ಳಗಿ, ಹಿರಿಯ ಮುಖಂಡ ಪಕೀರಪ್ಪಗೌಡ ವಾಗಣಗೇರಾ, ಕಾನೂನು ಸಲಹೆಗಾರ ಶರಣಪ್ಪ ವಾಗಣಗೇರಾ, ಹಣಮಂತ ಭದ್ರಾವತಿ, ಶರಣಪ್ಪ ವಾಗಣಗೇರಾ, ಸಾಹೇಬಗೌಡ ವಾಗಣಗೇರಾ, ಮಲ್ಲಪ್ಪ ಶೆಳ್ಳಗಿ, ಶರಣು ಕೋಗಿಲೆ ಮರೆಪ್ಪ ಕಟ್ಟಿಮನಿ, ಶೇಖ್ ಅಮ್ಜದ್, ಮಹ್ಮದ್ ಗೌಸ್ ಸೇರಿದಂತೆ ಅನೇಕರಿದ್ದರು.