ಯಾದಗಿರಿ | ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು : ಕಾರ್ಯಕರ್ತರಿಂದ ವಿಜಯೋತ್ಸವ
ಯಾದಗಿರಿ : ರಾಜ್ಯದ ಮೂರು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದ ಹಿನ್ನೆಲೆಯಲ್ಲಿ ಶನಿವಾರ ನಗರದ ಸುಭಾಷ್ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.
ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ಫಲದಾಯಕವಾಗಿವೆ ಎಂಬುದಕ್ಕೆ ಈ ಉಪ ಚುನಾವಣೆ ಫಲಿತಾಂಶ ಸಾಕ್ಷಿ. ಬಿಜೆಪಿಯವರು ಎನೆಲ್ಲಾ ಕುತಂತ್ರ ಮಾಡಿದರೂ ಮತದಾರರು ಅದಕ್ಕೆ ಬೆಲೆ ಕೊಡದೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸತತ ಹೋರಾಟದಿಂದ ಇಂದು ನಮ್ಮ ಮೂರು ಅಭ್ಯರ್ಥಿಗಳು ಬಹುಮತಗಳ ಅಂತರದಿಂದ ಗೆದ್ದಿದ್ದಾರೆ ಎಂದು ಹೇಳಿದರು.
ಈ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಯಾವ ತಂತ್ರಗಳು ನಡೆದಿಲ್ಲ. ಜನತೆ ನಮ್ಮ ಸರಕಾರದ ಯೋಜನೆಗಳ ಮೇಲೆ ವಿಶ್ವಾಸವಿಟ್ಟು ಮತ ನೀಡಿದ್ದಾರೆ. ಬರುವ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಸವರೆಡ್ಡಿಅನಪೂರ್, ಡಾ.ಭೀಮಣ್ಣ ಮೇಟ್ಟಿ, ಬಸ್ಸುಗೌಡ ಬಿಳ್ಹಾರ್, ಮಲ್ಲಿಕಾರ್ಜುನ ಈಟೆ, ಲಕ್ಷೀಮರೆಡ್ಡಿ, ಬಾಬುರಾವ ಕಾಡ್ಲೂರ್, ಚನ್ನಕೇಶವ ಬಾಣತಿಹಾಳ, ಹಣಮಂತ ನಾಯಕ, ಸುರೇಶ ಮಡ್ಡಿ, ಶರಣ ಬಸವ ಕುರಕುಂದಿ, ಶಿವು ಬೆಳಗುಂದಿ, ರಾಘವೇಂದ್ರ ಸಾಹುಕಾರ್, ಅಮರೇಶ ಜಾಕಾ ಸೇರಿದಂತೆ ಮತ್ತಿತರರು ಕಾರ್ಯಕರ್ತರು ಇದ್ದರು.