ಯಾದಗಿರಿ | ಆರ್ಥಿಕ ಸ್ವಾತಂತ್ರ್ಯಕ್ಕೆ ಸಹಕಾರಿ ಕ್ಷೇತ್ರವೇ ಹೆಬ್ಬಾಗಿಲು : ಮಲ್ಲಪ್ಪ ಸಂಕೀನ್

ಯಾದಗಿರಿ : ಆರ್ಥಿಕ ಸ್ವಾತಂತ್ರಕ್ಕೆ ಸಹಕಾರಿ ಕ್ಷೇತ್ರವೇ ಹೆಬ್ಬಾಗಿಲು. ಪತ್ರಕರ್ತರ ಆರ್ಥಿಕ ಸುಧಾರಣೆಯಲ್ಲಿ ಸಹಕಾರ ಸಂಘ ಪ್ರಮುಖವಾದ ಪಾತ್ರ ನಿರ್ವಹಿಸುತ್ತದೆ ಇದನ್ನು ಮನಗಂಡು ಸಹಕಾರಿ ಸಂಘ ಸ್ಥಾಪಿಸಲಾಗುತ್ತದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘ ಸ್ಥಾಪಿಸುವ ಕುರಿತು ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಪತ್ರಕರ್ತರ ಸಭೆಯಲ್ಲಿ ಮಾತನಾಡಿದರು.
ಪತ್ರಕರ್ತರ ಸಹಕಾರ ಸಂಘ ಸ್ಥಾಪನೆ ಮಾಡಲಾಗುತ್ತದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರದಲ್ಲಿ ಪ್ರಬಲವಾಗಿ ಬೆಳೆಯಲು ಅನುಕೂಲವಾಗುತ್ತದೆ. ಆರ್ಥಿಕವಾಗಿ ಬಲಗೊಳ್ಳುವುದು ತುಂಬ ಅಗತ್ಯವಿದೆ ಎಂದು ತಿಳಿಸಿದರು.
ಸಾಮಾಜಿಕ ವ್ಯವಸ್ಥೆ ಸುಧಾರಣೆಯಲ್ಲಿ ಪತ್ರಕರ್ತರು ಹಗಲು ರಾತ್ರಿ ಎನ್ನದೇ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಾರೆ. ಆದರೆ ಆರ್ಥಿಕವಾಗಿ ಸಾಕಷ್ಟು ಹಿಂದುಳಿದಿದ್ದಾರೆ. ಹೀಗಾಗಿ ಪತ್ರಕರ್ತರನ್ನು ಆರ್ಥಿಕವಾಗಿ ಮೆಲೇತ್ತಲು ಸಹಕಾರಿ ಸಂಘ ಸ್ಥಾಪಿಸಲಾಗುತ್ತದೆ ಎಂದು ತಿಳಿಸಿದರು.
ಪತ್ರಕರ್ತರ ಸಹಕಾರಿ ಸಂಘ ಸ್ಥಾಪನೆ ಮಾಡುವ ಕುರಿತಂತೆ ಈಗಾಗಲೇ ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಸರಕಾರದ ನಿಯಮಗಳ ಪ್ರಕಾರ ಸಂಘ ರಚಿಸುವ ಮೂಲಕ ಎಲ್ಲರಿಗೂ ಸಾಮಾಜಿಕ ನ್ಯಾಯ ಕಲ್ಪಿಸಲಾಗುವುದು ಎಂದು ಹೇಳಿದರು.
ಸಂಘದ ರಾಜ್ಯ ಪರಿಷತ್ತಿನ ಸದಸ್ಯ ರಾಘವೇಂದ್ರ ಕಾಮನಟಗಿ ಮಾತನಾಡಿ, ಪತ್ರಕರ್ತರ ಸಹಕಾರ ಸಂಘ ಮಾಡಬೇಕು ಎಂದು ಕಳೆದ ಒಂದು ದಶಕದಿಂದಲೂ ಪ್ರಯತ್ನ ಮಾಡಲಾಗುತ್ತದೆ. ಬಹು ದಿನಗಳ ಬಳಿಕ ಕನಸು ನನಸು ಆಗುತ್ತಿದೆ ಎಂದು ತಿಳಿಸಿದರು.
ಆರ್ಥಿಕವಾಗಿ ಪತ್ರಕರ್ತರು ಪ್ರಗತಿ ಹೊಂದಿ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲಿ ಎಂಬ ಉದ್ದೇಶದಿಂದಾಗಿ ಸಹಕಾರಿ ಸಂಘ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ರಾಜು ನಲ್ಲಿಕರ್, ಸಂಘದ ಕಾರ್ಯದರ್ಶಿ ಸಿದ್ದಪ್ಪ ಲಿಂಗೇರಿ, ಪತ್ರಕರ್ತರಾದ ಪಿ.ಹಣಮಂತ, ನಾಗರಾಜ ಕೋಟೆ, ರವಿಕುಮಾರ ನರಬೋಳಿ, ರವಿರಾಜ ಕಂದಳ್ಳಿ, ಕೆ.ಬಿ. ರಾಘವೇಂದ್ರ, ಭೀಮಣ್ಣ ವಡವಟ್, ರಾಜಲಿಂಗಪ್ಪ, ಮಲ್ಲಿಕಾರ್ಜುನ ಅರಿಕೇರಿಕರ್, ಅರುಣ್ ಮಾಸನ್, ಸುಧೀರ್, ರಾಜು ದೊರೆ ಸೇರಿದಂತೆ ಇನ್ನಿತರರಿದ್ದರು.
ಪತ್ರಕರ್ತ ನರಸಪ್ಪ ನಾರಾಯಣೋರ್ ನಿರೂಪಿಸಿ, ವಂದಿಸಿದರು.