ಯಾದಗಿರಿ | ದೇವಸ್ಥಾನದ ಹೆಸರಲ್ಲಿ ದೇಣಿಗೆ ಸಂಗ್ರಹ ಮಾಡಿದವರ ಮೇಲೆ ಕ್ರಮಕ್ಕೆ ಆಗ್ರಹ
ಯಾದಗಿರಿ : ಸುರಪುರ ತಾಲ್ಲೂಕಿನ ಕೆಂಭಾವಿ ಸಮೀಪದ ಗುತ್ತಿ ಬಸವೇಶ್ವರ ದೇವಸ್ಥಾನದ ಹೆಸರಲ್ಲಿ ನಕಲಿ ರಶೀದಿ ಪುಸ್ತಕ ಮಾಡಿ, ದೇವಸ್ಥಾನದ ಭಕ್ತರಿಂದ ಕೋಟ್ಯಾಂತರ ರೂ. ದೇಣಿಗೆ ರೂಪದಲ್ಲಿ ಹಣ ಸಂಗ್ರಹಣ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ಮುಖಂಡರು ನಗರದ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ.
ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ದೇವಸ್ಥಾನದ ಹೆಸರಲ್ಲಿ ನಕಲಿ ರಶೀದಿ ಪುಸ್ತಕ ಮಾಡಿ ದೇವಸ್ಥಾನದ ಭಕ್ತರಿಂದ ಕೋಟ್ಯಾಂತರ ರೂ. ದೇಣಿಗೆ ಸಂಗ್ರಹಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಈ ಹಿಂದೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ ನಂತರ ಹಿಂದೆ ಇದ್ದ ತಹಶೀಲ್ದಾರರು ದೇಣಿಗೆ ಸಂಗ್ರಹಿಸಿದವರ ಮೇಲೆ ಕೇಸ್ ದಾಖಲಿಸುವಂತೆ ಕೆಂಭಾವಿ ಉಪ ತಹಶೀಲ್ದಾರರಿಗೆ ತಿಳಿಸಿದ್ದರು. ಆದರೆ ಇದುವರೆಗೂ ಕೆಂಭಾವಿ ಉಪ ತಹಶೀಲ್ದಾರರು ಯಾವುದೇ ಕ್ರಮ ಕೈಗೊಂಡಿಲ್ಲ. ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ಡಿ.7 ರಂದು ಸುರಪುರ ನಗರದ ಮಹಾತ್ಮ ಗಾಂಧೀ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ಸಿರಸ್ತೆದಾರರ ಮೂಲಕ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಂಘಟನೆ ತಾಲ್ಲೂಕು ಸಂಚಾಲಕ ಬಸವರಾಜ ದೊಡ್ಮನಿ, ಮಾನಪ್ಪ ಬಿಜಾಸಪುರ ,ಶೇಖರ ಜೀವಣಗಿ, ರೇವಣಸಿದ್ದಪ್ಪ ಮಾಲಗತ್ತಿ, ವೀರಭದ್ರಪ್ಪ ತಳವಾರಗೇರಾ, ಖಾಜಾಹುಸೇಣ ಗುಡಗುಂಟಿ, ಜೆಟ್ಟೆಪ್ಪ ನಾಗರಾಳ, ಮಲ್ಲಿಕಾರ್ಜುನ ಶಾಖಾನವರ್, ಬಸವರಾಜ ಗೋನಾಲ, ಮಹೇಶ ಯಾದಗಿರಿ, ನಿಂಗಪ್ಪ ಹಂಪಿನ್, ತಿಪ್ಪಣ್ಣ ಗೋನಾಲ, ಹೊನ್ನಪ್ಪ ದೇವಿಕೇರಾ, ಮರೆಪ್ಪ ಹಾಲಗೇರಾ, ಬಸವರಾಜ ಗೋನಾಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.