ಯಾದಗಿರಿ | ನಗರಸಭೆ ಪೌರಾಯುಕ್ತರ ವಿರುದ್ಧ ಕ್ರಮಕ್ಕೆ ಆಗ್ರಹ
![Photo of Letter of appeal Photo of Letter of appeal](https://www.varthabharati.in/h-upload/2025/01/24/1317520-whatsapp-image-2025-01-24-at-61415-pm.webp)
ಯಾದಗಿರಿ : ನಗರಸಭೆಯ ನಗರ ಆಶ್ರಯ ಸಮಿತಿಗೆ ಸದಸ್ಯರಾಗಿ ನೇಮಕಗೊಂಡಿರುವ ನಾಲ್ವರು ಸದಸ್ಯರನ್ನು ಇದುವರೆಗೂ ಅಧಿಕಾರ ಸ್ವೀಕಾರ ಮತ್ತು ಪ್ರತಿಜ್ಞಾ ವಿಧಿ ಕಾರ್ಯಕ್ರಮ ನಡೆಸದ ಹಾಗೂ ನಗರಸಭೆ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ ಪೌರಾಯುಕ್ತರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ನಾಮ ನಿರ್ದೇಶನಗೊಂಡ ಸದಸ್ಯರು ಜಿಲ್ಲಾಧಿಕಾರಿ ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.
ಕಳೆದ 2024ರ ಸೆ.13 ರಂದು ಸರಕಾರ ನಮ್ಮನ್ನು ನೇಮಕ ಮಾಡಿದೆ, ಅಲ್ಲಿಂದ ಇಲ್ಲಿಯವರೆಗೂ ನಮಗೆ ಯಾವುದೇ ರೀತಿಯಿಂದಲ್ಲೂ ಮಾನ್ಯತೆ ಮಾಡಿಕೊಂಡಿಲ್ಲ. ಈ ಬಗ್ಗೆ ಅನೇಕ ಸಲ ವಿಚಾರಿಸಿದಾಗ ಸುಳ್ಳು ನೆಪ ಹೇಳಿ ಜಾರಿಕೊಂಡ ಪೌರಾಯುಕ್ತರು, ನಗರಸಭೆ ಕಟ್ಟಡದ ಉದ್ಘಾಟನೆ ವೇಳೆ ಸ್ವಾಗತಿಸಿ ಅಧಿಕಾರ ಸ್ವೀಕಾರ ಪ್ರತಿಜ್ಞಾ ವಿಧಿ ಕಾರ್ಯಕ್ರಮ ಮಾಡಿಸುವ ಭರವಸೆ ನೀಡಿದ್ದನ್ನು ಸಹ ಉಲ್ಲಂಘಿಸಿದ್ದಾರೆಂದು ಆಶ್ರಯ ಸಮಿತಿ ಸದಸ್ಯರಾದ ಪ್ರಭಾಕರ ಜಿ., ಆರತಿ ಅಂಬರೀಷ ಜಾಕಾ, ಶಿವಕುಮಾರ ಮತ್ತು ಇಮುನವೆಲ್ ಕ್ರಿಷ್ಟಫರ್ ಆರೋಪಿಸಿದ್ದಾರೆ.
ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರದಂತೆಯೇ ತಮ್ಮ ಹೆಸರು ಹಾಕಿಲ್ಲ ಮತ್ತು ಕಾರ್ಯಕ್ರಮಕ್ಕೂ ಆಹ್ವಾನಿಸಿಲ್ಲ, ಬದಲಿಗೆ ಶಿಷ್ಟಾಚಾರ ವ್ಯಾಪ್ತಿಗೆ ಒಳಪಡದ ರಾಜಕೀಯ ವ್ಯಕ್ತಿಗಳಿಗೆ ವೇದಿಕೆಯಲ್ಲಿ ಕೂರಿಸಿದ್ದಾರೆಂದು ಆರೋಪ ಮಾಡಿದ್ದಾರೆ. ಈಗಲೂ ಸುಳ್ಳು ಹೇಳಿ ಕಾಲ ನೂಕುತ್ತಿರುವ ಪೌರಾಯುಕ್ತರ ಮೇಲೆ ಕೂಡಲೇ ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.