ಯಾದಗಿರಿ | ಕುಡಿಯುವ ನೀರಿನ ವ್ಯವಸ್ಥೆಗೆ ಆಗ್ರಹ
ಯಾದಗಿರಿ : ಸುರಪುರ ತಾಲ್ಲೂಕಿನ ರತ್ತಾಳ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿ.ಜಿ ಸಾಗರ ಬಣದಿಂದ ನಗರದ ತಾಲ್ಲೂಕು ಪಂಚಾಯತ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ರತ್ತಾಳ ಗ್ರಾಮದಲ್ಲಿನ ಮರಗಮ್ಮ ದೇವಸ್ಥಾನದ ಬಳಿಯಲ್ಲಿದ್ದ ಹಳೆಯದಾದ ಕೊಳವೆ ಬಾವಿ ಕೆಟ್ಟು ಹೋಗಿದ್ದು, ದೇವಸ್ಥಾನ ಭಾಗದ ಜನರಿಗೆ ಕುಡಿಯುವ ನೀರಿನ ತೊಂದರೆ ಉಂಟಾಗಿದೆ. ಇದರ ಕುರಿತು ದೇವಿಕೇರಾ ಗ್ರಾಮ ಪಂಚಾಯತ್ ಅಭಿವೃಧ್ಧಿ ಅಧಿಕಾರಿಗಳಿಗೆ ತಿಳಿಸಿದರೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ಜನರಿಗೆ ತುಂಬಾ ತೊಂದರೆಯಾಗಿದ್ದು ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ಇಲ್ಲವಾದಲ್ಲಿ ನಮ್ಮ ಸಂಘಟನೆ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.
ನಂತರ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಬರೆದ ಮನವಿ ಕಚೇರಿ ವ್ಯವಸ್ಥಾಪಕರ ಮೂಲಕ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಂಘಟನೆ ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ, ಮುಖಂಡರಾದ ಚನ್ನಬಸಪ್ಪ ತಳವಾರ, ಶೇಖರ ಮಂಗಳೂರ, ವೆಂಕಟೇಶ ದೇವಾಪುರ, ಎಮ್.ಪಟೇಲ್, ಯಲ್ಲಪ್ಪ ರತ್ತಾಳ, ಶಿವಕುಮಾರ ದೀವಳಗುಡ್ಡ, ಮೌನೇಶ ಕಟ್ಟಿಮನಿ, ಸಾಯಿಬಣ್ಣ ಕೋಟೆ, ಹಣಮಂತ ರತ್ತಾಳ, ಕೃಷ್ಣಾ ಹಾವಿನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.