ಯಾದಗಿರಿ | ರೈತರಿಗೆ ಬಡ್ಡಿ ರಹಿತವಾದ ಸಾಲ ನೀಡುವುದೇ ಸಹಕಾರ : ಡಾ.ಸುರೇಶ ಸಜ್ಜನ್
ಯಾದಗಿರಿ : ಸಹಕಾರ ಎಂದರೆ ಬೇರೆ ಏನಿಲ್ಲ, ಜನರ ಏಳಿಗೆಗೆ ಸಂಘಗಳು ಕೆಲಸ ಮಾಡಬೇಕು, ಸರಕಾರ ಯಾವುದೇ ಇರಲಿ ರೈತರ ಏಳಿಗೆಗಾಗಿ ಬಡಿ ರಹಿತವಾಗಿ ಸಾಲ ನೀಡಬೇಕು ಎಂದು ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ.ಸುರೇಶ ಸಜ್ಜನ್ ತಿಳಿಸಿದ್ದಾರೆ.
ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟ, ಯಾದಗಿರಿ ಸಹಕಾರ ಇಲಾಖೆ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತಿಮ್ಮಾಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ 2024ರ ಅಂಗವಾಗಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತುಂಬಾ ಜನರು ಸಹಕಾರ ಸಂಘಗಳಿಗೆ ಸರಕಾರದ ಹಣ ಬರುತ್ತದೆ ಎಂದು ತಿಳಿದಿದ್ದಾರೆ. ಆದರೆ ಇದು ತಪ್ಪು ಸರಕಾರದ ಯಾವುದೇ ಹಣ ಬರುವುದಿಲ್ಲ, ಆದರೆ ಸಹಕಾರ ಸಂಘಗಳೇ ಎಲ್ಲ ಹಣವನ್ನು ಕ್ರೂಢಿಕರಿಸಿ ವ್ಯವಹಾರ ನಡೆಸಲಿವೆ. ಇಂದು ಸಹಕಾರ ಸಂಘಗಳ ಮೂಲಕ ಪ್ರಧಾನಮಂತ್ರಿ ಜನೌಷಧಿ ಮಳಿಗೆ, ಪೆಟ್ರೋಲ್ ಬಂಕ್, ಎಲ್.ಪಿ.ಜಿ ವಿತರಣಾ ಕೇಂದ್ರ ಆರಂಭಿಸಬಹುದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ವಿಶ್ವನಾಥರೆಡ್ಡಿ ದರ್ಶನಾಪುರ ಮಾತನಾಡಿ, ಕೇಂದ್ರ ಸರಕಾರದ ಸಹಕಾರ ಸಚಿವಾಲಯದ ನಿರ್ದೇಶನದಂತೆ ಜಿಲ್ಲೆಯಾದ್ಯಂತ ನ.14 ರಿಂದ 20ನೇ ತಾರಿಕಿನವರೆಗೆ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ನಡೆಸಲಾಗುವುದು. ಈ ಮೂಲಕ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳ ಏಳಿಗೆಯ ಕುರಿತು ಚರ್ಚಿಸುವ ಜೊತೆಗೆ ಹಿರಿಯ ಸಹಕಾರಿಗಳಿಗೆ ಸನ್ಮಾನ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಲಿದ್ದು ಎಲ್ಲಾ ಸಹಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪ ನಿರ್ದೇಶಕ ಸೇಡಂ ಗೋವಿಂದಪ್ಪ, ಸಹಕಾರ ಸಂಘಗಳ ಉಪ ನಿಬಂಧಕ ಆರ್.ಪವನಕುಮಾರ, ಒಕ್ಕೂಟದ ನಿರ್ದೇಶಕರಾದ ರಾಜಾ ಮುಕುಂದ ನಾಯಕ, ಶಾಂತಗೌಡ ಮುದನೂರ, ಶಿವಲೀಲಾ ಎಸ್.ಸಜ್ಜನ್, ಪ್ರಕಾಶ ಅಂಗಡಿ ಕನ್ನೆಳ್ಳಿ, ನಯೋಪ್ರಾ ಅಧ್ಯಕ್ಷ ಪ್ರಕಾಶ ಗುತ್ತೇದಾರ, ರವಿಕುಮಾರ ಸಿಡಿಓ, ಬಸವರಾಜ ಜಮದ್ರಖಾನಿ, ಕಿಶೋರಚಂದ್ ಜೈನ್, ಮಲ್ಲಿಕಾರ್ಜುನ ಕಡೆಚೂರ, ರಾಜು ಪುಲ್ಸೆ, ಭೀಮರಾಯ ಭಜಂತ್ರಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಬಸವರಾಜ ಕುಂಬಾರ, ಲೆಕ್ಕ ಪರಿಶೋಧಕ ಬಸವರಾಜ, ಚನ್ನಾರಡ್ಡಿ ಪಾಟೀಲ್, ಕೆಂಚಪ್ಪ ನಗನೂರ, ಪ್ರಕಾಶ ಅಂಗಡಿ ಕನ್ನೆಳ್ಳಿ, ಹಣಮಂತ್ರಾಯ ದೇವತ್ಕಲ್, ಸುಜಾತಾ ಮಠ್, ಶಿವರುದ್ರ ಉಳ್ಳಿ ಉಪಸ್ಥಿತರಿದ್ದರು.