ಯಾದಗಿರಿ | ಕೇಂದ್ರ ಸರಕಾರದ ನಡೆ ಖಂಡಿಸಿ ಡಿಎಸ್ಎಸ್‌ನಿಂದ ಅರೆಬೆತ್ತಲೆ ಮೆರವಣಿಗೆ
ಯಾದಗಿರಿ : ಸಂವಿಧಾನಿಕ ಸಂಸ್ಥೆಗಳ ದುರುಪಯೋಗ ಮಾಡಿಕೊಳ್ಳುತ್ತಿರುವ ಕೇಂದ್ರದ ಬಿಜೆಪಿ ಸರಕಾರದ ನಡೆಯನ್ನು ಖಂಡಿಸಿ ಹಾಗೂ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಪತನಗೊಳಿಸಲು ಷಡ್ಯಂತ್ರ ನಡೆಸಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಕ್ರಮವನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಸಂಘಟನೆ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಬುಧವಾರ ನಗರದಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಿದರು.
ಸಮಿತಿ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ, ಜಿಲ್ಲಾ ಸಂಘಟನಾ ಸಂಚಾಲಕ ಚಂದಪ್ಪ ಮುನಿಯೋಪ್ಪನವರ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಜಿಲ್ಲಾ ಕ್ರೀಡಾಂಗಣದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಅರೆಬೆತ್ತಲೆ ಮೆರವಣಿಗೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಡಿಸಿ ಕಚೇರಿ ಹೊರಾಂಗಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆ ಪ್ರಮುಖರು, ಕೇಂದ್ರ ಸರಕಾರದ ಅಧಿನದಲ್ಲಿರುವ ಈಡಿ, ಐಟಿ, ಸಿಬಿಐ ಮತ್ತು ರಾಜಭವನಗಳ ಮೂಲಕವೇ ಮಟ್ಟಹಾಕಿ ಬಾಯಿ ಮುಚ್ಚಿಸುವ ಕೆಲಸ ನಡೆದಿದೆ. ಇದು ಪ್ರಜಾಪ್ರಭುತ್ವದ ವಿರೋಧಿಯಾಗಿದೆ ಎಂದು ಆರೋಪಿಸಿದರು.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರ ಮೇಲೆ ಎಫ್ ಐಆರ್ ದಾಖಲಾಗಿರುವ ಕಾರಣಕ್ಕೆ ರಾಜಿನಾಮೆ ನೀಡಬೇಕೆಂಬ ಮಾನದಂಡ ನಿಗದಿಪಡಿಸಿದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಚಿವ ಸಂಪುಟದ ಕನಿಷ್ಟ 25 ರಿಂದ 30 ಸಚಿವರಾದರೂ ರಾಜಿನಾಮೆ ನೀಡಬೇಕಾಗುತ್ತದೆ ಎಂದು ದೂರಿದರು.
ಸಮಾನತೆ, ಸೌಹಾರ್ದತೆ, ನ್ಯಾಯ, ಅನ್ನ, ಅಕ್ಷರ ಮತ್ತು ಸ್ತ್ರೀ ಅಭ್ಯುದಯಕ್ಕೆ ಶ್ರಮಿಸುತ್ತಿರುವ ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ರಾಜಿನಾಮೆ ನೀಡಬಾರದೆಂದು ಪ್ರತಿಭಟನಾಕಾರರು ಒತ್ತಾಯಿಸಿ ಡಿಸಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿವಲಿಂಗ ಹಸನಾಪುರ, ಭೀಮಣ್ಣ ನಾಟೇಕಾರ, ಮಲ್ಲಿಕಾರ್ಜುನ ಹಸರಗುಂಡಗಿ, ಬಲಭೀಮ ಬೇವಿನಹಳ್ಳಿ, ವಾಸು ಕೋಗಿಲಕರ್, ಸಂದೀಪ್ , ಸುಭಾಷ ಹಸರಗುಂಡಗಿ, ತಾಯಪ್ಪ ಭಂಡಾರಿ, ಗಂಗರಾಮ್ ಬಬಲಾದ್, ಶರಣಪ್ಪ ದಾಸನಕೇರಿ, ಮರೆಪ್ಪ ಕ್ರಾಂತಿ, ಸಂತೋಷ ಗುಂಡಳ್ಳಿ, ಶರಣಪ್ಪ, ತಿಪ್ಪಣ್ಣ ಶೆಳ್ಳಗಿ, ಶೇಖರ ಮಂಗಳೂರು, ಎಂ.ಪಟೇಲ್, ಬಾಲರಾಜ್ ಖಾನಪುರ ಸೇರಿದಂತೆಯೇ ನೂರಾರು ಜನರು ಭಾಗವಹಿಸಿದ್ದರು.