ಯಾದಗಿರಿ | ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಒತ್ತಾಯ
ಸುರಪುರ : ತಾಲ್ಲೂಕಿನ ಹಾಲಬಾವಿ ಗ್ರಾಮ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮಿತಿ ಮೀರಿದ್ದು, ಇದರಿಂದ ಕುಟುಂಬಗಳು ಬೀದಿಗೆ ಬಿದ್ದಿವೆ ಕೂಡಲೇ ಗ್ರಾಮೀಣ ಭಾಗದಲ್ಲಿನ ಅಕ್ರಮ ಮದ್ಯ ಮಾರಾಟ ತಡೆಯುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ ಒತ್ತಾಯಿಸಿದ್ದಾರೆ.
ನಗರದ ಅಬಕಾರಿ ಇಲಾಖೆ ಕಚೇರಿ ಮುಂದೆ ಶನಿವಾರ ಮಧ್ಯಾಹ್ನ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಗ್ರಾಮಗಳಲ್ಲಿ ಕಿರಾಣಿ ಅಂಗಡಿ, ಹೋಟೆಲ್‌ಗಳ್ಲಲೂ ಅಕ್ರಮ ಮದ್ಯ ದೊರೆಯುತ್ತಿದೆ. ಇದರಿಂದ ಚಿಕ್ಕ ವಯಸ್ಸಿನ ಹುಡುಗರು ಮದ್ಯದ ದಾಸರಾಗುತ್ತಿದ್ದು ಮನೆಗಳು ಹಾಳಾಗುತ್ತಿವೆ. ಕ್ಷುಲ್ಲಕ ಕಾರಣಕ್ಕೆ ಜಗಳಗಳು ಹೆಚ್ಚುತ್ತಿವೆ. ಮನೆಗಳಲ್ಲಿ ನೆಮ್ಮದಿ ಇಲ್ಲದ ಪರಸ್ಥಿತಿ ಹೆಚ್ಚಿದೆ. ಇದಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ಕಾರಣರಾಗಿದ್ದಾರೆ ಎಂದು ಆರೋಪಿಸಿದರು.
ಸುರಪುರ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ತಡೆಯುವಂತೆ ಸುರಪುರ ಠಾಣೆ ಪಿ.ಐ ಆನಂದ ವಾಗಮೊಡೆ ಅವರಿಗೆ ರೈತ ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ ನೇತೃತ್ವದಲ್ಲಿ ಮನವಿ ಸಲ್ಲಿಸಿ ಆಗ್ರಹಿಸಿದರು. ನಂತರ ಅಬಕಾರಿ ಇಲಾಖೆ ನಿರೀಕ್ಷಕರಿಗೆ ಬರೆದ ಮನವಿ ಪತ್ರವನ್ನು ಕಚೇರಿ ಸಿರಸ್ತೆದಾರ ಭಾಗ್ಯಶ್ರೀ ಅವರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ತಾಲ್ಲೂಕು ಗೌರವಾಧ್ಯಕ್ಷ ಮಲ್ಲಣ್ಣ ಹಾಲಬಾವಿ, ತಾಲ್ಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳ ಚಂದಲಾಪುರ, ಗ್ರಾ.ಪಂ ಸದಸ್ಯ ಶಾಂತಗೌಡ, ಮುಖಂಡರಾದ ಉಸ್ಮಾನಸಾಬ, ಚನ್ನಪ್ಪ ಐದುಬಾವಿ, ಬಸವರಾಜ ಗುರುವಿನ್, ದಂಡಪ್ಪ ಗುಳಬಾಳ, ನಾಗಪ್ಪ ದೊರಿ, ನಾಗಪ್ಪ ಹುಣಸಿಹೊಳೆ, ಬಸವರಾಜ ಬಿರಾದಾರ, ಬಸವರಾಜ ಜಂಬದಿನ್ನಿ, ಭಾಗಣ್ಣ ಮಾಲಿ ಬಿರಾದಾರ, ದೇವಿಂದ್ರಪ್ಪ ಬಿರಾದಾರ, ಹುಸನಪ್ಪ ಚಲುವಾದಿ ಸೇರಿದಂತೆ ಇತರರಿದ್ದರು.