ಯಾದಗಿರಿ | ನಗರೋತ್ಥಾನ ಯೋಜನೆಯಡಿ ಕಾಮಗಾರಿಯ ಗುಣಮಟ್ಟತೆ ಆಧಾರದ ಮೇಲೆ ಅನುದಾನ ನೀಡಿ : ಸಚಿವ ರಹೀಂ ಖಾನ್

ಯಾದಗಿರಿ: ನಗರೋತ್ಥಾನ ಯೋಜನೆಯಡಿ ಗುಣಮಟ್ಟದ, ಸಮರ್ಪಕ ಕಾಮಗಾರಿ ಆಧಾರದ ಮೇಲೆ ಅನುದಾನ ಮಂಜೂರು ಮಾಡುವಂತೆ ಪೌರಾಡಳಿತ ಹಾಗೂ ಹಜ್ ಖಾತೆ ಸಚಿವರಾದ ರಹೀಂ ಖಾನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ನಗರೋತ್ಥಾನ ಹಂತ- 3ರ ಕಾಮಗಾರಿಗಳು ಪೂರ್ಣಗೊಂಡಿವೆ. ನಗರೋತ್ಥಾನ ಹಂತ-4ರ ಅಡಿಯಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸಬೇಕು. ಗುಣಮಟ್ಟದ ಕಾಮಗಾರಿಗಳ ಕುರಿತು ಜಿಲ್ಲಾಧಿಕಾರಿಗಳು ಮತ್ತು ಶಾಸಕರ ಸಮೀಕ್ಷೆ ಆಧಾರದ ಮೇಲೆ ಗುಣಮಟ್ಟದ, ತೃಪ್ತಿಕರ ಕೆಲಸ ಪರಿಶೀಲಿಸಿ ಅನುದಾನ ಬಿಡುಗಡೆ ಮಾಡುವಂತೆ ಸೂಚನೆ ನೀಡಿದರು.
ಜಿಲ್ಲೆಯ ಶಹಾಪುರ, ಸುರಪುರ, ಗುರುಮಠಕಲ್, ಕೆಂಭಾವಿ ನಗರಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯ ಸುಮಾರು 9 ಕೋ. ರೂಗಳಿಗೂ ಹೆಚ್ಚು ವೆಚ್ಚದ ಒಟ್ಟು ಆರು ಕಾಮಗಾರಿಗಳನ್ನು ಕರ್ನಾಟಕ ನಗರ ನೀರು ಸರಬರಾಜು ಇಲಾಖೆ ಮೂಲಕದ ಕಾಮಗಾರಿಗಳಿಗೆ ಅನುದಾನ ಒದಗಿಸಲು ಸೂಚಿಸಲಾಗಿದೆ. ಈವರೆಗೆ ಈ ಕುರಿತು ಕ್ರಮ ಆಗದೇ ಇರುವುದರಿಂದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಪೌರಾಡಳಿತ ಇಲಾಖೆಯ ಗಮನಕ್ಕೆ ತಂದು ನಗರ ನೀರು ಸರಬರಾಜು ಇಲಾಖೆಗೆ ಅನುದಾನ ಹಸ್ತಾಂತರಿಸುವ ಬಗ್ಗೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸುರಪುರದಲ್ಲಿ ಒಳಚರಂಡಿ ಯೋಜನೆ ಭಾಗಶಃ ಪೂರ್ಣಗೊಂಡಿದೆ. ಪುನರ್ನವೀಕರಣ ಕಾಮಗಾರಿಗೆ ಸಂಬಂಧಪಟ್ಟಂತೆ 50 ಕೋಟಿ ರೂ. ವೆಚ್ಚದ ಡಿಪಿಆರ್ ಸಲ್ಲಿಸಲಾಗಿದೆ. ಈ ಕುರಿತು ಕ್ರಿಯಾಯೋಜನೆ ಶೀಘ್ರ ಸಲ್ಲಿಸಿ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ವಿವಿಧ ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಖಾಲಿ ಹುದ್ದೆಗಳಿಗೆ ಸಂಬಂಧಪಟ್ಟಂತೆ ಸೂಕ್ತ ವರದಿಯನ್ನು ಸಲ್ಲಿಸಬೇಕು. ಈ ಕುರಿತು ಪೌರಾಡಳಿತ ಇಲಾಖೆಯ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ನಗರೋತ್ಥಾನ ಯೋಜನೆಯಡಿ ಸಮರ್ಪಕ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಪೌರಾಡಳಿತ ಇಲಾಖೆ ಹಾಗೂ ಹಣಕಾಸು ಇಲಾಖೆ ಅನುಮತಿ ಕುರಿತು ಸ್ಪಷ್ಟತೆಯನ್ನು ಮಾಡಿಕೊಳ್ಳಬೇಕು. ಎಸ್.ಎಫ್.ಸಿ ಯೋಜನೆ,15ನೇ ಹಣಕಾಸು ಆಯೋಗದ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ಸೂಕ್ತ ಪ್ರಗತಿ ಸಾಧಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಶಾಸಕರಾದ ಚೆನ್ನಾರಡ್ಡಿ ಪಾಟೀಲ್ ತುನ್ನೂರ್, ಶರಣಗೌಡ ಕಂದಕೂರ, ವೇಣುಗೋಪಾಲ್ ನಾಯಕ, ಪ್ರಭಾರಿ ಜಿಲ್ಲಾಧಿಕಾರಿ ಲವೀಶ ಒರಡಿಯಾ, ಕಾರ್ಯಪಾಲಕ ಅಭಿಯಂತರ ವಿಶ್ವನಾಥ್, ಪೌರಾಡಳಿತ ಸಚಿವರ ಆಪ್ತ ಕಾರ್ಯದರ್ಶಿ ಕೆ.ಮುರಲಿಧರ ಉಪಸ್ಥಿತರಿದ್ದರು.