ಯಾದಗಿರಿ | ಸಮಾಜಕ್ಕೆ ಕಾಯಕನಿಷ್ಠೆ, ತತ್ವಾದರ್ಶ ಹೇಳಿಕೊಟ್ಟವರು ಕಾಯಕ ಶರಣರು : ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್

ಯಾದಗಿರಿ : ಕಾಯಕನಿಷ್ಠೆಯ ತತ್ವ ಆದರ್ಶವನ್ನು ಸಮಾಜಕ್ಕೆ ತಿಳಿಸಿಕೊಟ್ಟ ಕಾಯಕ ಶರಣರು, ಕಾಯಕದಲ್ಲಿಯೇ ಕೈಲಾಸವಿದೆ ಎಂದು ಸಮಾಜಕ್ಕೆ ತಿಳಿ ಹೇಳಿದರು ಎಂದು ನಗರ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಅವರು ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಕಾಯಕ ಶರಣರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ, ಗೌರವ ಅರ್ಪಿಸಿ ಅವರು ಮಾತನಾಡಿದರು.
ಸತ್ಕರ್ಮದ ಕಾಯಕದಿಂದ ವ್ಯಕ್ತಿ ಬೆಳೆಯುತ್ತಾನೆ. ಜೀವನದಲ್ಲಿ ಸದಾ ಕಾಯಕನಿರತರಾಗಬೇಕೆಂಬುದು ಶರಣರ ಧ್ಯೇಯ ಹಾಗೂ ತತ್ವಾದರ್ಶವಾಗಿತ್ತು. ಮನಸ್ಸಿನಿಂದ ಮಾಡುವ ಕಾಯಕವೇ ದೊಡ್ಡದೆಂದು ನಂಬಿದವರು ಶರಣರು. ಮಾದಾರ ಚನ್ನಯ್ಯ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿ, ಮಾದಾರ ಧೂಳಯ್ಯರವರಂತಹ ಮುಂತಾದ ಮಹಾನ್ ಶರಣರು ತಮ್ಮ ಕಾಯಕದ ಆದರ್ಶದಿಂದ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿದರು ಎಂದು ಹೇಳಿದರು.
12ನೆಯ ಶತಮಾನದಲ್ಲಿಯೇ ಬಸವಾದಿ ಶರಣರು ದುಡಿಮೆಯ ಮಹತ್ವವನ್ನು ಸಮಾಜಕ್ಕೆ ಹೇಳಿಕೊಟ್ಟು ಸಮಾಜ ತಿದ್ದುವ ಕಾರ್ಯ ಮಾಡಿದರು. ಅಂತಹ ಕಾಯಕ ಶರಣರು ಇಂದಿಗೂ ನಮಗೆ ದಾರಿ ದೀಪವಾಗಿದ್ದಾರೆ ಎಂದು ಹೇಳಿದರು.
ಸಮಾರಂಭದಲ್ಲಿ ಉಪನ್ಯಾಸ ನೀಡಿದ, ಸರ್ಕಾರಿ ಪದವಿ ಕಾಲೇಜು ಉಪನ್ಯಾಸಕರಾದ ಶ್ರೀ ನರಸಪ್ಪ ಚಿತ್ತಾಪುರ ಅವರು, ಶರಣರು ತಾವು ಮಾಡುವ ಕಾಯಕನಿಷ್ಠೆ ಹಾಗೂ ತಮ್ಮ ವಚನಗಳಿಂದಲೇ ಇಂದಿಗೂ ಸ್ಮರಣೀಯರಾಗಿದ್ದಾರೆ. ಶರಣರು ನೀಡಿದ ಸಮಾನತೆಯ ಸಿದ್ಧಾಂತ ಇಂದಿಗೂ ಪ್ರಸ್ತುತವಾಗಿದೆ. ಶರಣರು ಎಲ್ಲರನ್ನೂ ಸಮಾನವಾಗಿ ಕಂಡರು. ಶರಣರು ಆರೋಗ್ಯಕರ ಸಮಾಜಕ್ಕಾಗಿ ಶ್ರಮಿಸಿದರು ಎಂದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರ ದೇವಿ ಮಠಪತಿ, ಕಾಯಕಶರಣರ ಜಯಂತೋತ್ಸವದ ಅಧ್ಯಕ್ಷರಾದ ನಾಗರಾಜ್ ಬೀರನೋರ್, ಮಲ್ಲು ದೊಡ್ಮನಿ ಬೆಳಗೆರೆ, ಭೀಮರಾಯ ಹೊಸಮನಿ, ಶಾಂತಪ್ಪ ಖಾನಳ್ಳಿ, ಸೈದಪ್ಪ ಕೊಲೂರ, ಕಾಶಪ್ಪ ಹೆಗ್ಗಣಗೇರಾ, ಮರೆಪ್ಪ ಶಿರವಾಳ ಮತ್ತು ತಂಡ ದಿಂದ ಸಂಗೀತ ಕಾರ್ಯಕ್ರಮ ನಡೆಸಿದರು.
ಸಮಾಜದ ಮುಖಂಡರಾದ ಮರೆಪ್ಪ ಚಟ್ಟೇರಕರ್, ಗೋಪಾಲ್, ವಿಜಯಕುಮಾರ್, ಭೀಮರಾಯ ಲಿಂಗೇರಿ, ತಿಪ್ಪಣ್ಣ ಹಳಿಗೇರಾ, ಮಲ್ಲಿಕಾರ್ಜುನ್ ಜಿನೆಕೆರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.