ಯಾದಗಿರಿ | ವಿಶೇಷ ಚೇತನರು ಆತ್ಮವಿಶ್ವಾಸದೊಂದಿಗೆ ಸ್ವ-ಉದ್ಯೋಗ ಕೈಗೊಂಡಲ್ಲಿ, ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿದೆ : ಲವೀಶ ಒರಡಿಯಾ
ʼವಿಶೇಷ ಚೇತನರ ಸೌರ ಸ್ವ-ಉದ್ಯೋಗ ಮಾಹಿತಿʼ ಕಾರ್ಯಾಗಾರ
ಯಾದಗಿರಿ : ವಿಶೇಷ ಚೇತನರು ತಮ್ಮ ಜೀವನದಲ್ಲಿ ಆತ್ಮವಿಶ್ವಾಸದೊಂದಿಗೆ ಸ್ವ-ಉದ್ಯೋಗ ಕೈಗೊಂಡಲ್ಲಿ, ಆರ್ಥಿಕವಾಗಿ ಸದೃಢರಾಗಿ, ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ ಒರಡಿಯಾ ಅವರು ಹೇಳಿದ್ದಾರೆ.
ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪಂಚಾಯತ್, ಸೆಲ್ಕೋ ಫೌಂಡೇಶನ್, ಬೆಂಗಳೂರು ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ "ವಿಶೇಷ ಚೇತನರ ಸೌರ ಸ್ವ-ಉದ್ಯೋಗ ಮಾಹಿತಿ" ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿಶೇಷ ಚೇತನರು ಸಮಾಜದಲ್ಲಿ ಆತ್ಮವಿಶ್ವಾಸದಿಂದ ಇರಬೇಕು. ತಮ್ಮನ್ನು ತಾವು ಗುರುತಿಸಿಕೊಳ್ಳಲು ಹಾಗೂ ಘನತೆ ಹೆಚ್ಚಿಸಿಕೊಳ್ಳಲು ಆರ್ಥಿಕವಾಗಿ ಮುಂದೆ ಬರಬೇಕು. ಇದಕ್ಕಾಗಿ ಸ್ವ-ಉದ್ಯೋಗ ಅತ್ಯಂತ ಉಪಯುಕ್ತವಾಗಿದೆ ಎಂದು ಹೇಳಿದರು.
ವಿಶೇಷ ಚೇತನರು ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ಬೇರೆ ಅವರಿಗಿಂತ ಕಡಿಮೆಇಲ್ಲ ಎಂದು ಸಾಬೀತುಪಡಿಸಲು ಸದಾ ಆತ್ಮವಿಶ್ವಾಸದಿಂದ ಇರಬೇಕು ಎಂದ ಅವರು ಸರಕಾರದ ವಿವಿಧ ಇಲಾಖೆಗಳಿಂದಲೂ ತಮಗೆ ಅವಶ್ಯಕ ಸಹಕಾರ ಹಾಗೂ ನೆರವು ಒದಗಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಶ್ರೀ ಶರಣಗೌಡ ಅವರು ಮಾತನಾಡಿ, ವಿಶೇಷ ಚೇತನರ ಬದುಕು ರೂಪಿಸಲು ಸೆಲ್ಕೋ ಸಂಸ್ಥೆ ಸಬ್ಸಿಡಿ ರೂಪದಲ್ಲಿ ಹಲವು ರೀತಿಯ ಯಂತ್ರ-ಉಪಕರಣಗಳನ್ನುಒದಗಿಸಿ ಪ್ರೋತ್ಸಾಹಿಸುತ್ತಿರುವುದು ಪ್ರಶಂಸನೀಯ. ಬಿಸಿಲು ನಾಡು ಕಲ್ಯಾಣ ಕರ್ನಾಟಕದಲ್ಲಿ ಸೌರಶಕ್ತಿ ಮೂಲಕ ಯಂತ್ರೋಪಕರಣಗಳಿಂದ ವಿಶೇಷ ಚೇತನರಿಗೆ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.
ಸೆಲ್ಕೋ ಇಂಡಿಯಾ ಸೋಲಾರ್ ಕಲಬುರಗಿ ವಿಭಾಗದ ಏರಿಯಾ ಮ್ಯಾನೇಜರ್ ಯಲ್ಲಾಲಿಂಗ ದೊಡಮನಿ ಮಾತನಾಡಿ, ಸೆಲ್ಕೊ ಸಂಸ್ಥೆ ಮೂಲಕ ಶಿಕ್ಷಣ, ಆರೋಗ್ಯ ಕ್ಷೇತ್ರ, ವಿಶೇಷ ಚೇತನರಿಗೆ ಸ್ವ-ಉದ್ಯೋಗ ಹೀಗೆ ಹಲವು ರೀತಿಯಲ್ಲಿ ನೆರವು ಒದಗಿಸುತ್ತಿದೆ ಎಂದು ಹೇಳಿದರು. ಇದಕ್ಕೂ ಮುನ್ನ ಸಿಇಓ ಅವರು ಸೌರ ಬಳಕೆ ತಂತ್ರಜ್ಞಾನ ದ ಸೋಲಾರ್ ಕುಂಬಾರಿಕೆ ಯಂತ್ರ, ಚಕ್ಕುಲಿ ತಯಾರಿಸುವ ಯಂತ್ರ, ಕಬ್ಬಿನ ಹಾಲು ತಯಾರಿಕೆ ಯಂತ್ರ, ಹೊಲಿಗೆ ಯಂತ್ರ, ಸೋಲಾರ್ ಝರಾಕ್ಸ್ ಯಂತ್ರ, ಸೋಲಾರ್ ರೊಟ್ಟಿ ತಯಾರಿಕೆ ಯಂತ್ರವನ್ನು ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಭೀಮರಾವ್ ಪಾಂಚಾಳ್, ಎಪಿಡಿ ನಿರ್ದೇಶಕರು ರಮೇಶ ದುಂಡಪ್ಪ, ಕೆಜಿಬಿ ಪ್ರಾದೇಶಿಕ ವ್ಯವಸ್ಥಾಪಕ ಜಿ.ಎಸ್.ಕೊಡ್ಲಿ, ಸೆಲ್ಕೋ ಕಾರ್ಯಕ್ರಮ ನಿರ್ವಾಹಕ ಚಂದ್ರಶೇಖರ ಮಡಿವಾಳರ್, ವ್ಯವಸ್ಥಾಪಕ ಫಣೀಂದ್ರ ಸಿಂಗ್ ,ಲಕ್ಷ್ಮಿಕಾಂತ್ ಕುಲಕರ್ಣಿ, ವಿ ಆರ್.ಡಬ್ಲ್ಯು ಹಾಗೂ ಎಂ.ಆರ್ ಡಬ್ಲ್ಯು ಕಾರ್ಯಕರ್ತರು ಉಪಸ್ಥಿತರಿದ್ದರು.