ಯಾದಗಿರಿ | ಜಲಾಶಯ, ಕಾಲುವೆಗಳ ದುರಸ್ಥಿಗೆ ಕ್ರಮ : ಶಾಸಕ ಕಂದಕೂರ
ಯಾದಗಿರಿ : ರೈತರ ಬಹುದಿನದ ಬೇಡಿಕೆಯಾದ ಕಾಲುವೆಗಳ ದುರಸ್ಥಿಗೆ ಆದಷ್ಟು ಬೇಗ ಕ್ರಮ ಕೈಗೊಂಡು, ಕೊನೆಯ ಭಾಗದ ರೈತರ ಜಮೀನಿನ ಬೆಳೆಗಳಿಗೆ ನೀರು ತಲುಪಿಸಲು ಅನುಕೂಲ ಮಾಡುತ್ತೇನೆ ಎಂದು ಗುರುಮಿಠಕಲ್ ಮತಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ಹೇಳಿದ್ದಾರೆ.
ಸೋಮವಾರ ತಾಲ್ಲೂಕಿನ ಹತ್ತಿಕುಣಿ ಪ್ರವಾಸಿ ಮಂದಿರ ಆವರಣದಲ್ಲಿ ಕರ್ನಾಟಕ ನೀರವಾರಿ ನಿಗಮ ನಿಯಮಿತ, 2024-25ನೇ ಸಾಲಿನ ಬೆಳೆಗಳಿಗೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಭಾಗದಲ್ಲಿ 2 ಜಲಾಶಯಗಳಿಂದ ಸುಮಾರು 8 ಸಾವಿರಕ್ಕೂ ಹೆಚ್ಚು ಎಕರೆ ರೈತರ ಜಮೀನು ಬೆಳೆಗಳಿಗೆ ನೀರು ಹರಿಸಬಹುದು ಎಂದು ಈಗಾಗಲೇ ಅಧಿಕಾರಿಗಳು ತಿಳಿಸಿದ್ದಾರೆ. ನಿರ್ವಹಣೆಗೆ ರಾಜ್ಯ ಸರಕಾರದಿಂದ ಸರಿಯಾಗಿ ಅನುದಾನ ಬಿಡುಗಡೆಯಾಗಿಲ್ಲ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಈ ವಿಷಯ ಪ್ರಸ್ಥಾಪಿಸಿ ಹಾಗೂ ಉಪ ಮುಖ್ಯಮಂತ್ರಿ ನೀರಾವರಿ ಸಚಿವರಾದ ಡಿ.ಕೆಶಿವಕುಮಾರ ಅವರನ್ನು ಭೇಟಿಯಾಗಿ ಕಾಲುವೆಗಳ ದುರಸ್ಥಿಗೊಳಿಸಲು ಅನುದಾನ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಹತ್ತಿಕುಣಿ ಜಲಾಶಯ ನೀರು ಬಳಕೆದಾರ ಸಹಕಾರ ಸಂಘ ಮಹಾ ಮಂಡಳದ ಅಧ್ಯಕ್ಷ ವೀರಭದ್ರಪ್ಪ ಯಡ್ಡಳ್ಳಿ ಮಾತನಾಡಿ, ಈಗಾಗಲೇ ಅನುದಾನದ ಕೊರತೆಯಿಂದ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತ್ನ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಾಲುವೆಗಳ ಸ್ವಚ್ಚತೆ ಹಾಗೂ ಹೂಳು ತೆಗೆಯಲಾಗಿದೆ, ಅಧಿಕಾರಿಗಳು ಕೂಡ ಆಗಾಗ ಕಾಲುವೆಗಳಿಗೆ ಭೇಟಿ ನೀಡಿ, ಸಣ್ಣ ಪುಟ್ಟ ಸಮಸ್ಯೆಗಳನ್ನು ಪರಿಹಾರ ಮಾಡಿ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದರು.
ವೇದಿಕೆ ಮೇಲೆ ಅಮೀನರಡ್ಡಿ ಬಿಳ್ಹಾರ, ಮಹಿಪಾಲರಡ್ಡಿ ಪಾಟೀಲ್ ಹತ್ತಿಕುಣಿ, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಹೊನಗೇರಾ, ಶರಣಪ್ಪಗೌಡ ಮಾಲಿ ಪಾಟೀಲ್, ಬೋಜಣಗೌಡ ಯಡ್ಡಳ್ಳಿ, ಬಸ್ಸುಗೌಡ ಚಾಮನಳ್ಳಿ, ಈಶಪ್ಪ ಸಾಹುಕಾರ ಹೊನಗೇರಾ, ರವಿ ಪಾಟೀಲ್ ಹತ್ತಿಕುಣಿ, ಜೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಮಾಣಿಕರಾವ ಕುಲಕರ್ಣಿ, ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಚೇತನ ಕಳಾಸ್ಕರ್, ಇಂಜಿನಿಯರ್ಗಳಾದ ಶ್ರವಣ್, ಕಾವೇರಿ, ಪಿಎಸ್ಐ ಹಣಮಂತ ಬಂಕಲಗಿ, ಕೃಷಿ ಇಲಾಖೆ ಅಧಿಕಾರಿ ನರೇಶ, ರಾಮಣ್ಣ ಕೋಟಗೇರಾ, ಸಾಬು ಹೋರುಂಚಾ, ಸೋಮನಗೌಡ ಬೆಳಗೇರಾ, ಸಿದ್ದಪ್ಪ ಹೋರುಂಚಾ ಸೇರದಂತೆ ಅನೇಕರು ಉಪಸ್ಥಿತರಿದ್ದರು.