ಯಾದಗಿರಿ | ಖಾದಿ ಬಟ್ಟೆ ಖರೀದಿಸಿ ಉತ್ಪಾದಕರಿಗೆ ಪ್ರೋತ್ಸಾಹಿಸಲು ಶಾಸಕ ಚೆನ್ನಾರೆಡ್ಡಿ ಪಾಟೀಲ್ ಕರೆ
ಯಾದಗಿರಿ : ನಗರದ ಶುಭಂ ಪೆಟ್ರೋಲ್ ಬಂಕ್ ಹತ್ತಿರ ತುನ್ನೂರ ಕಾಂಪೌಂಡ್ ಹೈದರಾಬಾದ್ ರಸ್ತೆ ಬಳಿ ನ.26ರಿಂದ ಡಿ.10ರವರೆಗೆ ಆಯೋಜಿಸಲಾದ ರಾಜ್ಯ ಮಟ್ಟದ ಖಾದಿ, ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಮಾತನಾಡಿ, ಬಾಪೂಜಿ ಅವರು ಖಾದಿ ವಸ್ತುಗಳ ಬಳಕೆಗೆ ಸ್ವದೇಶಿ ಆಂದೋಲನದ ಮೂಲಕ ಭಾರತೀಯರನ್ನು ಪ್ರೋತ್ಸಾಹಿಸಿದ್ದರು. ಅವರ ಕನಸು ನನಸಾಗಿಸಲು ಖಾದಿ ವಸ್ತು ಬಳಸಿ, ಖರೀದಿಸಿ ಉತ್ಪಾದಕರಿಗೂ ಉತ್ತೇಜಿಸಬೇಕು. ಖಾದಿ ಬಟ್ಟೆ ತೊಡುವುದರಿಂದ ಮನಸ್ಸು ಸಹ ಉಲ್ಲಾಸಭರಿತವಾಗುತ್ತದೆ. ನೋಡಲು ಸಹ ಆಕರ್ಷಕವಾಗಿರುವುದರಿಂದ ಖಾದಿ ಪ್ರಿಯರು ಈ ಬಟ್ಟೆಗಳನ್ನು ಖರೀದಿಸಿ ಉತ್ಪಾದಕರಿಗೆ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಸಿಇಓ ವಿ.ಕೆ.ವೆಂಕಟೇಶ್ ಮಾತನಾಡಿ, ಖಾದಿ ಕುಶಲ ಕರ್ಮಿಗಳಿಗೆ ಸರಕಾರ ಹಲವು ರೀತಿಯಲ್ಲಿ ನೆರವಾಗುತ್ತಿದೆ. ರಾಜ್ಯದಲ್ಲಿ ವಾರ್ಷಿಕ 300 ಕೋಟಿ ರೂ.ಗಳ ಉತ್ಪಾದನೆ ಮತ್ತು ವ್ಯವಹಾರ ನಡೆಯುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಪ್ರಾಣೇಶ್ ಆಚಾರ್ಯ ಅವರು ಸಂವಿಧಾನದ ಪೀಠಿಕೆ ಓದಿದರು. ಖಾದಿ, ಚರಖ ನೂಲು ಹಾಗೂ ನೇಯ್ಗೆ ಕುಶಲಕರ್ಮಿಗಳಾದ ಬಸಮ್ಮ ಅವರಿಗೆ ಸನ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ ಒರಡಿಯಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಸಹಾಯಕ ಆಯುಕ್ತರು ಹಂಪಣ್ಣ ಸಜ್ಜನ್, ಕೈಗಾರಿಕೆ ಕೇಂದ್ರ ಜಂಟಿ ನಿರ್ದೇಶಕರು ಬಿ.ಸತೀಶ್ ಕುಮಾರ್, ತಹಶೀಲ್ದಾರ್ ಸುರೇಶ್, ರಾಯಚೂರು ಖಾದಿ ಗ್ರಾಮೋದ್ಯೋಗ ಮಂಡಳಿ ಮಾಜಿ ಸದಸ್ಯ ಮಲ್ಲಿಕಾರ್ಜುನ ನಾಗಪ್ಪ, ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಮನೀಶ ಸಿ.ಎಚ್, ಸಾವಿತ್ರಿ ದಳವಾಯಿ, ಉಪಸ್ಥಿತರಿದ್ದರು.