ಯಾದಗಿರಿ | ನವಜಾತ ಶಿಶು ಮೃತ್ಯು : ಸಮುದಾಯ ಆರೋಗ್ಯ ಕೇಂದ್ರದ ವಿರುದ್ಧ ಪೋಷಕರ ಆಕ್ರೋಶ
ಸಾಂದರ್ಭಿಕ ಚಿತ್ರ
ಯಾದಗಿರಿ/ ಗುರುಮಠಕಲ್ : ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ನವಜಾತ ಶಿಶುವೊಂದು ಮೃತಪಟ್ಟಿದ್ದು, ಆರೋಗ್ಯ ಕೇಂದ್ರದ ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ತಾಲ್ಲೂಕಿನ ಅನಪುರ ಗ್ರಾಮದ ಗಾಯತ್ರಿ ನವೀನ ದಾಸರಿ ಅವರು ಹೆರಿಗೆಗೆಂದು ಮಂಗಳವಾರ ಪಟ್ಟಣದ ಸಿಎಚ್ಸಿ ಅಸ್ಪತ್ರೆಗೆ ಬಂದಿದ್ದರು. ಆದರೆ, ಕೆಲವು ಪರೀಕ್ಷೆಗಳಿಗೆ ವೈದ್ಯರು ಶಿಫಾರಸು ಮಾಡಿದ್ದಾರೆ. ಪರೀಕ್ಷೆ ಮಾಡಿಸಲು ಯಾದಗಿರಿ ನಗರಕ್ಕೆ ತೆರಳಬೇಕಿದ್ದರಿಂದ ಮಂಗಳವಾರ ರಾತ್ರಿ ಪಟ್ಟಣದಲ್ಲಿರುವ ಸಂಬಂಧಿಕರ ಮನೆಯಲ್ಲಿ ತಂಗಿದ್ದಾರೆ. ಬುಧವಾರ ಮಧ್ಯಾಹ್ನ 2 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಮತ್ತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದಿದ್ದಾರೆ. ಆ ವೇಳೆಗೆ ಶಿಶುವಿನ ತಲೆ ಭಾಗವು ಹೊರಬಂದಿತ್ತು. ನಂತರ ಆರೋಗ್ಯ ಕೇಂದ್ರದಲ್ಲಿ ಹೆರಿಗೆಯಾಗಿದ್ದು, ಜನನದ ಕೆಲ ಸಮಯದಲ್ಲೇ ಶಿಶುಮರಣ ಸಂಭವಿಸಿದೆ ಎಂದು ತಿಳಿದುಬಂದಿದೆ.
ಯಾದಗಿರಿ ನಗರದ ಜಿಲ್ಲಾಸ್ಪತ್ರೆಗೆ ಹೋಗುವಂತೆ ಇಲ್ಲಿನ ವೈದ್ಯರು ಹೇಳಿದ್ದರು. ಆದರೆ, ಆಂಬುಲೆನ್ಸ್ ವ್ಯವಸ್ಥೆ ಲಭ್ಯವಾಗಲಿಲ್ಲ. ನಮ್ಮಂತ ಬಡವರ ಜೀವಕ್ಕೆ ಬೆಲೆಯಿಲ್ಲದಂತಾಗಿದೆ ಎಂದು ಪೋಷಕರಾದ ಜನಾರ್ದನ ದಾಸರಿ (ಹೆರಿಗೆಯಾದ ಗಾಯತ್ರಿ ದಾಸರಿ ತಂದೆ) ತಮ್ಮ ಅಳಲನ್ನು ತೊಡಿಕೊಂಡರು.