ಯಾದಗಿರಿ | ಮೈಕ್ರೋ ಫೈನಾನ್ಸ್ ಕಿರುಕುಳ ಕಡಿವಾಣಕ್ಕೆ ಶೀಘ್ರದಲ್ಲೇ ಸುಗ್ರೀವಾಜ್ಞೆ : ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು

ಚೆನ್ನಾರೆಡ್ಡಿ ಪಾಟೀಲ್ ತುನ್ನೂರು
ಯಾದಗಿರಿ : ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸಾಲ ಪಡೆಯುವವರನ್ನು ರಕ್ಷಿಸುವ ಸುಗ್ರೀವಾಜ್ಞೆಯ ಕರಡು ಸಿದ್ಧವಾಗಿದ್ದು, ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮೋದನೆಗಾಗಿ ಕಳುಹಿಸಲಾಗಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ ನಂತರ ಸುಗ್ರೀವಾಜ್ಞೆಯನ್ನು ರಾಜ್ಯಪಾಲರ ಅನುಮೋದನೆಗಾಗಿ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.
ಮೈಕ್ರೋ ಫೈನಾನ್ಸ್ ಕಂಪನಿಗಳು ಅಮಾನವೀಯ ರೀತಿಯಲ್ಲಿ ಸಾಲಗಾರರಿಂದ ಹಣವನ್ನು ವಸೂಲಿ ಮಾಡುತ್ತಿದ್ದು, ಅಪಾರ ಹಿಂಸೆ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಕಿರುಕುಳ ತಡೆಗಟ್ಟಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಕರಡು ಸಿದ್ಧಪಡಿಸಿದೆ. ರಾಜ್ಯಪಾಲರು ಅನುಮೋದನೆ ನೀಡಿದ ತಕ್ಷಣ ಜಾರಿಗೊಳಿಸಲಾಗುವುದು ಎಂದು ಪಾಟೀಲ್ ಹೇಳಿದರು.
ಸ್ಥಳೀಯವಾಗಿ ಫೈನಾನ್ಸ್ ನವರಿಂದ ಯಾರೇ ಕಿರುಕುಳಕ್ಕೆ ಒಳಗಾದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬೇಕು. ಫೈನಾನ್ಸ್ ನಿಂದ ಕಿರುಕುಳ ಇದ್ದಲ್ಲಿ ಮುಂದೆ ಬಂದರೆ ಅಂತವರ ಬೆನ್ನಿಗೆ ಸರ್ಕಾರ ನಿಲ್ಲಲಿದೆ ಯಾರೊಬ್ಬರ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಸರ್ಕಾರ ಆದಷ್ಟು ಬೇಗ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿ ಬಡವರಿಗೆ, ಕೂಲಿ ಕಾರ್ಮಿಕರಿಗೆ ಮತ್ತು ರೈತರಿಗೆ ನೆರವಾಗಲಿದೆ ಎಂದು ತಿಳಿಸಿದ್ದಾರೆ.