ಯಾದಗಿರಿ | ಶೇಂಗಾ ಬೆಳೆಗೆ ನೀರು ಹರಿಸಲು ಒತ್ತಾಯಿಸಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ
ಯಾದಗಿರಿ : ಜಿಲ್ಲೆಯ ರೈತರು ಈಗಾಗಲೇ ಬರ-ನೆರೆಯಿಂದ ಬೆಳೆ ಹಾನಿಗೆ ಒಳಗಾಗಿ ಸಂಕಷ್ಟದಲ್ಲಿದ್ದು, ಇದರ ನಡುವೆ ಶೇಂಗಾ ಬೆಳೆಗಾರರಿಗೆ ಶಾಕ್ ಎದುರಾಗಿದೆ. ಶೇಂಗಾ ಬೆಳೆ ಕಟಾವು ಮಾಡಲು ಇನ್ನೆನು ಒಂದು ವಾರ ಇರುವಾಗಲೇ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕಾಲುವೆ ನೀರು ಬಂದ್ ಮಾಡಿದ್ದರಿಂದ ಬೆಳೆ ಒಣಗುವ ಸ್ಥಿತಿಗೆ ಬಂದಿದೆ. ಅಧಿಕಾರಿಗಳ ನಡೆ ವಿರೋಧಿಸಿ ರೈತರ ಜಮೀನಿನಲ್ಲೇ ಉಮೇಶ.ಕೆ.ಮುದ್ನಾಳ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ ನಡೆಸಲಾಯಿತು.
ಯಾದಗಿರಿ ತಾಲೂಕಿನ ಹನೂರು(ಬಿ) ಹಾಗೂ ಹನೂರು(ಕೆ) ಗ್ರಾಮದ ರೈತರು ಕಳೆದ 40 ವರ್ಷಗಳಿಂದ ಭೀಮಾ ನದಿಯ ದಡದ ಚಿಗಾನೂರ್ ಬ್ರಿಜ್ ಕಂ ಬ್ಯಾರೇಜ್ ಮೂಲಕ ರೈತರು ತಮ್ಮ ಜಮೀನುಗಳ ಬೆಳೆಗೆ ನೀರುಣಿಸುತ್ತಿದ್ರು, ಈ ಬಾರಿ ಅತೀ ಹೆಚ್ಚು ಮಳೆಯಾಗಿದ್ದರಿಂದ ಜಮೀನಿಗಳಿಗೆ ನೀರುಣಿಸಿ ಅಧಿಕ ಇಳುವರಿ ಹಾಗೂ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಅಧಿಕಾರಿಗಳು ಹಾಗೂ ಶಾಸಕರ ದಿವ್ಯ ನಿರ್ಲಕ್ಷ್ಯಕ್ಕೆ ರೈತರು ಬೆಳೆಗಳಿಗೆ ನೀರುಣಿಸಲು ಸಂಕಷ್ಟಪಡುತ್ತಿದ್ದಾರೆ. ರೈತರು ಅಧಿಕಾರಿಗಳ ಕಚೇರಿ, ಜನಪ್ರತಿನಿಧಿಗಳ ಕಚೇರಿಗೆ ಅಲೆದಾಡಿ ಕಾಲುವೆಗೆ ನೀರು ಹರಿಸಬೇಕೆಂದು ಕೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಈ ಭಾಗದ 500ಕ್ಕೂ ಎಕರೆ ಶೇಂಗಾ, ಭತ್ತ, ಹತ್ತಿ, ಸಜ್ಜೆ ಮುಂತಾದ ಬೆಳೆಗಳಿಗೆ ನೀರು ಸಿಗುತ್ತಿಲ್ಲ. ಇದರಿಂದಾಗಿ ರೈತರ ಬದುಕಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಹೋರಾಟಗಾರ ಉಮೇಶ.ಕೆ.ಮುದ್ನಾಳ ಮಾತನಾಡಿ, ರೈತರು ಈಗಾಗಲೇ ಸಾಲ-ಸೂಲ ಮಾಡಿಕೊಂಡು ಶೇಂಗಾ, ಭತ್ತ ಸೇರಿದಂತೆ ನಾನಾ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಇನ್ನೆನು ಕೆಲವೇ ದಿನಗಳಲ್ಲಿ ಫಸಲು ಬರಲಿದೆ, ಇಂತಹ ಸಂದರ್ಭದಲ್ಲಿ ಕಾಲುವೆಯ ನೀರು ಬಂದ್ ಮಾಡಿದರೆ ರೈತರ ಕತ್ತು ಹಿಸುಕಿದಂತಾಗುತ್ತದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾಲುವೆಗೆ ನೀರು ಹರಿಸಿ ರೈತರ ಬೆಳೆ ರಕ್ಷಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.