ಯಾದಗಿರಿ | ಎಡದಂಡೆ ಕಾಲುವೆಗಳಿಗೆ ನೀರು ಹರಿಸಲು ಸಿಎಂ ಸಿದ್ದರಾಮಯ್ಯಗೆ ಮಾಜಿ ಸಚಿವ ರಾಜುಗೌಡರಿಂದ ಮನವಿ

ಸುರಪುರ : ಕೃಷ್ಣಾ ಎಡದಂಡೆ ಕಾಲುವೆಗಳಿಗೆ ಏ.10ರ ವರೆಗೆ ನಿರಂತರವಾಗಿ ನೀರು ಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿರುವುದಾಗಿ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ನರಸಿಂಹ ನಾಯಕ (ರಾಜುಗೌಡ) ತಿಳಿಸಿದರು.
ಸಿಎಂ ಗೆ ಮನವಿ ಮಾಡಿದ ನಂತರ ಈ ಕುರಿತು ಪತ್ರಿಕೆಗೆ ಹೇಳಿಕೆ ನೀಡಿದ ಅವರು, ಮುಖ್ಯಮಂತ್ರಿಗಳಿಗೆ ರೈತರ ಬೆಳೆಗಳಿಗೆ ಅಗತ್ಯವಿರುವ ನೀರಿನ ಕುರಿತು ಮನವರಿಕೆ ಮಾಡಿದ್ದೇವೆ, ಈ ಹಿಂದೆಯೂ ಇಷ್ಟೇ ಪ್ರಮಾಣದಲ್ಲಿ ನೀರು ಇದ್ದಾಗ ಬೆಳೆಗಳಿಗೆ ನೀರು ಬಿಡಲಾಗಿದೆ, ಅಲ್ಲದೆ ಜಲಾಶಯದಲ್ಲಿ ನೀರು ಲಭ್ಯವಿದೆ ಎಂದು ತಿಳಿಸಿದ್ದೇವೆ. ಮುಖ್ಯಮಂತ್ರಿಗಳು ಕೋಯ್ನಾ ಜಲಾಶಯ ದಿಂದ ನೀರು ಬಿಡಲು ಮಹಾರಾಷ್ಟ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ, ಕೋಯ್ನಾ ಜಲಾಶಯದಿಂದ ನೀರು ಬಿಟ್ಟಲ್ಲಿ ಬಿಡುವುದಾಗಿ ಹಾಗೂ ಅಧಿಕಾರಿಗಳನ್ನು ಕರೆದ ಮಾಹಿತಿ ಪಡೆದು ತಮಗೆ ತಿಳಿಸುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಬಸನಗೌಡ ಯಡಿಯಾಪೂರ, ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ.ಸುರೇಶ ಸಜ್ಜನ್, ಚಂದ್ರಶೇಖರಗೌಡ ಮಾಗನೂರ, ಬಸನಗೌಡ ಹಳ್ಳಿಕೋಟಿ, ವಿರೇಶ ಚಿಂಚೋಳಿ, ಬಸವರಾಜಸ್ವಾಮಿ ಸ್ಥಾವರಮಠ, ವೆಂಕಟೇಶ, ಕೃಷ್ಣಾರಡ್ಡಿ ಮುದನೂರ, ಮೋತಿಲಾಲ ಚವ್ಹಾಣ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ನೀರಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರಿಗೂ ಮನವಿ ಸಲ್ಲಿಸಿದ್ದೇವೆ, ರೈತರಿಗಾಗಿ ನೀರು ತರಲು ನಿರಂತರವಾಗಿ ಪ್ರಯತ್ನ ಹೋರಾಟ ನಡೆಸುವೆ.
- ರಾಜುಗೌಡ ಮಾಜಿ ಸಚಿವ