ಯಾದಗಿರಿ | ಅಕ್ರಮ ಚಟುವಟಿಕೆ ತಡೆಯಲು ಒತ್ತಾಯಿಸಿ ಎಸ್ಪಿಗೆ ಮನವಿ
ಯಾದಗಿರಿ : ಜಿಲ್ಲೆಯಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ದಂಧೆ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳನ್ನು ತಡೆಯಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡರು ಸುರಪುರ ನಗರಕ್ಕೆ ಆಗಮಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಥ್ವಿಕ್ ಶಂಕರ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯ ಸಂಚಾಲಕ ಕೊಟ್ರೇಶ ಚೌದ್ರಿ ಮಾತನಾಡಿ, ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ, ಅಲ್ಲದೆ ಅಕ್ರಮ ಮದ್ಯ ಮಾರಾಟ, ಕೋಳಿ ಪಂದ್ಯಾ, ಜೂಜು, ಮಟ್ಕಾ ಹಾಗೂ ಆನ್ ಲೈನ್ ಜೂಜಾಟ ದಿಂದ ಅನೇಕ ಯುವಕರು ತುಂಬಾ ನಷ್ಟ ಅನುಭವಿಸುತ್ತಿದ್ದಾರೆ, ಅಲ್ಲದೆ ಅಕ್ರಮ ಚಟುವಟಿಕೆಗಳಿಂದ ಸಮಾಜದಲ್ಲಿ ಅಶಾಂತಿ ಉಂಟಾಗಿ ಗಲಾಟೆಗಳು ನಡೆಯುತ್ತಿವೆ, ಯುವ ಜನತೆ ದುಶ್ಚಟಗಳಿಂದ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಕೂಡಲೇ ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಅಕ್ರಮ ಚಟುವಟಿಕೆಗಳನ್ನು ತಡೆಯುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಮರಿಲಿಂಗಪ್ಪಗೌಡ ಅಡ್ಡೊಡಗಿ, ಸಾಮಾಜಿಕ ಕಾರ್ಯಕರ್ತ ಸಚಿನ್ ಕುಮಾರ ನಾಯಕ ಇದ್ದರು.