ಯಾದಗಿರಿ | ರೈತರ ಸಮಸ್ಯೆ ಪರಿಹಾರಕ್ಕಾಗಿ ತಾಲ್ಲೂಕು ಕಚೇರಿ ಆರಂಭಿಸಲು ಮನವಿ
ಯಾದಗಿರಿ : ಜಿಲ್ಲೆಯ ರೈತರ ವಿವಿಧ ಬೇಡಿಕೆಗಳು ಹಾಗೂ ಮೂರು ನೂತನ ತಾಲ್ಲೂಕು ಕಚೇರಿಗಳು ಆರಂಭಿಸುವುದರ ಜೊತೆಗೆ ಹೊಸ ತಾಲ್ಲೂಕುಗಳನ್ನು ಅಭಿವೃದ್ಧಿ ಪಡಿಸುವಂತೆ ರೈತ ಸಂಘ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ ಒತ್ತಾಯಿಸಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ ವಾಸುದೇವ ಮೇಟಿ ಬಣದ ವತಿಯಿಂದ ಬೆಳಗಾವಿಯ ಸುವರ್ಣ ಸೌಧದ ಎದುರುಗಡೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯದ್ಯಕ್ಷರಾದ ವಾಸುದೇವ್ ಮೇಟಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಧರಣಿ ಸ್ಥಳಕ್ಕೆ ಸರಕಾರದ ಪರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಧರಣಿ ಸ್ಥಳಕ್ಕೆ ಆಗಮಿಸಿದಾಗ ರೈತ ಸಂಘ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ ಹಾಗೂ ಇನ್ನಿತರರು ಸೇರಿ ಸಚಿವರಿಗೆ ಮನವಿ ಸಲ್ಲಿಸಿದರು
ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ನೂತನವಾಗಿ ಘೋಷಣೆ ಮಾಡಿರುವ ಮೂರು ತಾಲ್ಲೂಕುಗಳಾದ ಗುರುಮಿಟ್ಕಲ್, ವಡಗೇರಾ, ಹುಣಸಗಿ, ತಾಲ್ಲೂಕು ಕೇಂದ್ರಗಳಲ್ಲಿ ವಿವಿಧ ಸರಕಾರಿ ಕಚೇರಿಗಳ ಆರಂಭಿಸುವುದರ ಜೊತೆಗೆ ನೂತನ ತಾಲ್ಲೂಕುಗಳ ಅಭಿವೃದ್ಧಿಗೆ ಸರಕಾರ ಹೆಚ್ಚಿನ ಅನುದಾನ ನೀಡಬೇಕು ಮತ್ತು ಆಕಸ್ಮಿಕ ಮಳೆಗೆ ಭತ್ತ, ಹತ್ತಿ ಬೆಳೆ ಹಾನಿಯಾಗಿದ್ದು, ಇತ್ತೀಚಿಗೆ ತೊಗರಿ ಬೆಳೆಗೆ ನೆಟೆ ರೋಗ ಬಂದಿದ್ದು ತುಂಬಾ ಹಾನಿಯಾಗಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು ತಮ್ಮ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾಧ್ಯಕ್ಷ ಪ್ರಶಾಂತ್ ಗೌಡ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವ ಶರಣಪ್ಪ ಸಾಹುಕಾರ ತಡಿಬಿಡಿ, ಹುಣಸಗಿ ತಾಲೂಕ ಅಧ್ಯಕ್ಷ ಮಲ್ಲನಗೌಡ ಬಿರಾದರ, ಕಾರ್ಯಧ್ಯಕ್ಷ ಮಲ್ಲೇಶಪ್ಪ ಗೌಡ ಪಾಟೀಲ್, ವಡಗೇರಾ ತಾಲೂಕು ಅಧ್ಯಕ್ಷ ವಿದ್ಯಾಧರ್ ಜಾಕ,ಗುರು ಗುಂಡಕನಾಳ, ಪರಶುರಾಮ್ ಇಸ್ಲಾಂಪುರ, ಹಾಗೂ ಪದಾಧಿಕಾರಿಗಳು ಸದಸ್ಯರು ರೈತ ಮುಖಂಡರು ಉಪಸ್ಥಿತರಿದ್ದರು.