ಯಾದಗಿರಿ | ಸುರಪುರ ಪೊಲೀಸ್ ಠಾಣೆಯಲ್ಲಿ ಎಸ್‌ಸಿ, ಎಸ್‌ಟಿ ಕುಂದು ಕೊರತೆ ಸಭೆ
ಯಾದಗಿರಿ : ಸುರಪುರ ಪೊಲೀಸ್ ಠಾಣೆಯ ಸಭಾಂಗಣದಲ್ಲಿ ಸುರಪುರ ಪೊಲೀಸ್ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆಗಳ ಸಭೆ ನಡೆಸಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಅಸ್ಪಶ್ಯತೆ ಇನ್ನೂ ಜೀವಂತವಾಗಿದೆ. ದೇವಸ್ಥಾನಗಳಿಗೆ ಪ್ರವೇಶವಿಲ್ಲ,ಹೋಟೆಲ್‌ಗಳಲ್ಲಿ ಪ್ರವೇಶವಿಲ್ಲದಂತ ಘಟನೆಗಳು ಕಾಣಸಿಗುತ್ತವೆ. ಅಲ್ಲದೆ ದಲಿತರ ಮೇಲೆ ದೌರ್ಜನ್ಯ ನಡೆದಾಗ ಪೊಲೀಸ್ ಠಾಣೆಗೆ ದೂರು ನೀಡಲು ಬಂದಾಗ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಅಟ್ರಾಸಿಟಿ ಪ್ರಕರಣಗಳಲ್ಲಿ ಇನ್ನೂ ಅನೇಕ ಪ್ರಕರಣಗಳಲ್ಲಿ ಸರಕಾರದ ಪರಿಹಾರ ಧನ ಲಭಿಸಿಲ್ಲ ಇಂತಹ ಸಮಸ್ಯೆಗಳು ಮೊದಲು ದೂರವಾಗಿಸಬೇಕು ಎಂದರು.
ಸುರಪುರ ನಗರದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿ ನಿರ್ಮಿಸಬೇಕು. ನಗರದಲ್ಲಿ ಸಿಸಿಟಿವಿ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮೀಣ ಭಾಗದಲ್ಲಿ ಇಸ್ಪಿಟ್, ಮಟಕಾ, ಜೂಜಾಟಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪಿಐ ಆನಂದ ವಾಗಮೊಡೆ ಮಾತನಾಡಿ, ತಾವೆಲ್ಲರು ಸಭೆಗೆ ಆಗಮಿಸಿ ಅಗತ್ಯವಾದ ಬೇಡಿಗೆಳನ್ನು ತಿಳಿಸಿದ್ದಿರಿ, ತಮ್ಮೆಲ್ಲ ಬೇಡಿಕೆಗಳನ್ನು ಮುಂಬರುವ ದಿನಗಳಲ್ಲಿ ಈಡೇರಿಸುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಎಸ್‌ಸಿ, ಎಸ್‌ಟಿ ಕುಂದು ಕೊರತೆಗಳ ಸಭೆಗೆ ಮುಖ್ಯವಾಗಿ ತಹಶೀಲ್ದಾರರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ನಗರಸಭೆ ಅಧಿಕಾರಿಗಳು ಯಾರೂ ಇಲ್ಲದಿರುವ ಕುರಿತು ಬೇಸರ ವ್ಯಕ್ತಪಡಿಸಿದರು. ಮುಂದಿನ ಸಭೆಯಲ್ಲಿ ಎಲ್ಲಾ ಅಧಿಕಾರಿಗಳನ್ನು ಕಡ್ಡಾಯವಾಗಿ ಭಾಗವಹಿಸುವಂತೆ ತಿಳಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಮುಖಂಡರಾದ ರಮೇಶ ದೊರೆ ಆಲ್ದಾಳ, ವೆಂಕೋಬದೊರೆ ಬೊಮ್ಮನಹಳ್ಳಿ, ಕರವೇ ತಾಲ್ಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮರಡಿ, ಭೀಮರಾಯ ಸಿಂದಗೇರಿ, ಹಣಮಂತ ಕಟ್ಟಿಮನಿ ಬೊಮ್ಮನಹಳ್ಳಿ, ಸಚಿನಕುಮಾರ ನಾಯಕ, ನಾಗರಾಜ ಓಕಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.