ಯಾದಗಿರಿ | ಸದೃಢ ಪ್ರಜಾಪ್ರಭುತ್ವ ರಾಷ್ಟ್ರಕ್ಕಾಗಿ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ : ನ್ಯಾ.ಮರಿಯಪ್ಪ
![Photo of Program Photo of Program](https://www.varthabharati.in/h-upload/2025/01/25/1317723-untitled-36.webp)
ಯಾದಗಿರಿ : ಇಂದಿನ ಯುವ ಮತದಾರರು ಭಾರತದ ಭವಿಷ್ಯದ ನಾಗರಿಕರಾಗಿರುವುದರಿಂದ ಸದೃಢ ಪ್ರಜಾಪ್ರಭುತ್ವ ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ತಪ್ಪದೇ ಮತ ಚಲಾಯಿಸುವಂತೆ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮರಿಯಪ್ಪ ಅವರು ಯುವ ಜನಾಂಗಕ್ಕೆ ಕರೆ ನೀಡಿದರು.
ನಗರದ ಸರಕಾರಿ ಪದವಿ ಕಾಲೇಜ್ ನಲ್ಲಿಂದು ರಾಷ್ಟ್ರೀಯ ಮತದಾರರ ದಿನವನ್ನು ಉದ್ಘಾಟಿಸಿ, ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಅವರು, 18 ವರ್ಷ ತುಂಬಿದವರು ತಪ್ಪದೇ ಮತದಾರರ ಗುರುತಿನ ಚೀಟಿಯನ್ನು ಪಡೆಯುವ ಜೊತೆಗೆ ಚುನಾವಣೆಗಳಲ್ಲಿ ಎಚ್ಚರಿಕೆಯಿಂದ ಹಾಗೂ ಜಾಗೃತಿಯಿಂದ ಮತ ಚಲಾಯಿಸುವ ಮೂಲಕ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ತಿಳಿಸಿದರು.
ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕ ಚುನಾವಣೆಗಳಿಗಾಗಿ ಜಾತಿ, ಧರ್ಮ ಆಧಾರಿತ ಹಾಗೂ ಇತರೆ ಆಮೀಷಗಳಿಗೆ ಒಳಗಾಗದೆ, ಈ ದೇಶ ಮತ್ತು ನಾಡನ್ನು ಸನ್ಮಾರ್ಗಕ್ಕೆ ಹಾಗೂ ವಿಶ್ವದ ಎತ್ತರಕ್ಕೆ ಒಯ್ಯುವಂತಹ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಸಂವಿಧಾನದ ಆಶಯ ಈಡೇರಿಸಬೇಕು. ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಉತ್ತಮ ಸರಕಾರದ ರಚನೆಗೆ ಮತದಾನ ಪ್ರಕ್ರಿಯೆಯಲ್ಲಿ ಮತದಾರರು ತಪ್ಪದೇ ಭಾಗವಹಿಸುವಂತೆ ಸಲಹೆ ನೀಡಿದರು.
ನಾವಿಂದು ಅತ್ಯಾಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಈ ನಾಡಿನ ಹಾಗೂ ದೇಶದ ಪ್ರಜೆಗಳಾದ ನಾವು ನಮಗೆ ಬೇಕು -ಬೇಡದ ಬಗ್ಗೆ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡುವ ಮೂಲಕ ಕಾನೂನಾತ್ಮಕವಾಗಿ ನೀತಿ ನಿಯಮಗಳನ್ನು ರೂಪಿಸಿ ಸದೃಢ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣಕ್ಕೆ ನೆರವಾಗಬೇಕು. ಮತ ಚಲಾಯಿಸುವ ಎಲ್ಲ ಪ್ರಕ್ರಿಯೆಗಳನ್ನು ಮುಂಚಿತವಾಗಿ ಅರಿತುಕೊಂಡು ಜಾಗೃತಿಯಿಂದ ಮತ ಚಲಾಯಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಭಾರಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಣಾಧಿಕಾರಿಗಳಾದ ಶ್ರೀ ಲವೀಶ್ ಒರಡಿಯಾ ಅವರು, ಸದೃಢ ಪ್ರಜಾಪ್ರಭುತ್ವ ರಾಷ್ಟ್ರ ಹೊಂದಿರುವ ಭಾರತದಲ್ಲಿ ಪ್ರಜೆಗಳೇ ಪ್ರಭುಗಳು. ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಲು ಅರ್ಹ ಮತದಾರರು ಗುರುತಿನ ಚೀಟಿಯನ್ನು ಪಡೆಯಬೇಕು ಹಾಗೂ ತಪ್ಪದೇ ಮತ ಚಲಾಯಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳಾದ ಶರಣಬಸಪ್ಪ ಕೋಟೆಪ್ಪಗೋಳ ಅವರು, ವಿಶ್ವದ ಅತ್ಯಂತ ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದಾಗಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಬೆಳವಣಿಗೆಗೆ ಪ್ರಜಾಪ್ರಭುತ್ವ ಅತ್ಯಂತ ಮುಖ್ಯವಾಗಿದೆ, ಭಾರತದ ಚುನಾವಣಾ ಆಯೋಗ ಪಾರದರ್ಶಕ ಚುನಾವಣೆಗಳನ್ನು ನಡೆಸುವ ಮೂಲಕ ಸದೃಢ ಪ್ರಜಾಪ್ರಭುತ್ವ ಮತ್ತು ದೇಶಕ್ಕಾಗಿ ನೆರವಾಗಿದೆ. ಯುವ ಜನಾಂಗ ಮತದಾರರ ಗುರುತಿನ ಚೀಟಿಯನ್ನು ಪಡೆದು ತಮ್ಮ ಹಕ್ಕನ್ನು ಚಲಾಯಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪಾರದರ್ಶಕ ರೀತಿಯಲ್ಲಿ ಚುನಾವಣೆ ನಡೆಸುವಲ್ಲಿ ಉತ್ತಮ ಸೇವೆ ಸಲ್ಲಿಸಿದ ರಾಜ್ಯಮಟ್ಟದ, ಜಿಲ್ಲಾಮಟ್ಟದ ಮಾಸ್ಟರ್ ಟ್ರೇನರ್ ಗಳಿಗೆ, ಬೂತ್ ಲೆವೆಲ್ ಅಧಿಕಾರಿಗಳು ಮತ್ತು ಮೇಲ್ವಿಚಾರಕರಿಗೆ ಹಾಗೂ ಉತ್ತಮ ಮತಗಟ್ಟೆ ಅಧಿಕಾರಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ, ಕ್ವೀಝ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. 18 ವರ್ಷ ತುಂಬಿದ ಯುವ ಮತದಾರರಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು. ಮತದಾನ ಮಹತ್ವದ ವಿಡಿಯೋ ಪ್ರದರ್ಶಿಸಿ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಪಿ. ಪೃಥ್ವಿಕ್ ಶಂಕರ್, ಸಹಾಯಕ ಆಯುಕ್ತರಾದ ಹಂಪಣ್ಣ ಸಜ್ಜನ್, ಜಿಲ್ಲಾ ಪಂಚಾಯತ್ ನ ಉಪ ಕಾರ್ಯದರ್ಶಿ, ವಿಜಯಕುಮಾರ್ ಮಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಕುಮುಲಯ್ಯ, ಸಮಾಜ ಕಲ್ಯಾಣ ಅಧಿಕಾರಿ ಚೆನ್ನಬಸಪ್ಪ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಚ.ಮುಧೋಳ್, ಜಿಲ್ಲಾ ಪಂಚಾಯತ್ ಎನ್ .ಆರ್. ಡಿ. ಎಂ. ಎಸ್ ಅಧಿಕಾರಿ ಸಿದ್ದಾರೆಡ್ಡಿ ಉಪಸ್ಥಿತರಿದ್ದರು. ಯುವ ಸಬಲೀಕರಣ ಹಾಗೂ ಕ್ರೀಡಾಧಿಕಾರಿ ರಾಜು ಬಾವಿಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಚುನಾವಣಾ ತಹಶೀಲ್ದಾರ್ ಸಂತೋಷಿ ರಾಣಿ ಅವರು ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.