ಯಾದಗಿರಿ | ಉತ್ತಮ ಭವಿಷ್ಯಕ್ಕಾಗಿ ಪ್ರತಿದಿನ 6 ರಿಂದ 8 ಗಂಟೆ ವಿದ್ಯಾಭ್ಯಾಸ ಮಾಡಿ : ಯಲ್ಲಪ್ಪ ಕಾಡ್ಲೂರ್
ಯಾದಗಿರಿ : ಭವಿಷ್ಯದಲ್ಲಿ ವಿದ್ಯಾರ್ಥಿಗಳು ವೈದ್ಯ, ಇಂಜಿನಿಯರ್, ಉಪನ್ಯಾಸಕ, ಐಎಎಸ್, ಐಪಿಎಸ್ ಅಧಿಕಾರಿ ಮತ್ತಿತರ ಉನ್ನತ್ತ ಹುದ್ದೆಗೆ ಏರಬೇಕಾದರೆ ಪ್ರತಿದಿನ ಆರರಿಂದ ಎಂಟು ಗಂಟೆಯವರೆಗೆ ವಿದ್ಯಾಭ್ಯಾಸ ಮಾಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ್ ಹೇಳಿದರು.
ಸುರಪುರ ತಾಲ್ಲೂಕಿನ ದೇವಿಕೇರಾ ಗ್ರಾಮದ ಪಿಎಂ ಶ್ರೀ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡ ಶಾಲೆ ಮಕ್ಕಳಿಗೆ ವೃತ್ತಿ ಮಾರ್ಗದರ್ಶನ ಮತ್ತು ತಜ್ಞರ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಗುರಿ, ಛಲ, ಆತ್ಮವಿಶ್ವಾಸ, ಏಕಾಗ್ರತೆ ತುಂಬ ಮುಖ್ಯ, ತಾವು ಮುಂದೆ ಏನಾದರೂ ಸಾಧನೆ ಮಾಡಬೇಕಾದರೆ ಶಿಸ್ತಿನ ಜೊತೆಗೆ ಶಿಕ್ಷಣ ಪಡೆಯಬೇಕು. ಪ್ರಪಂಚದಲ್ಲಿ ಹಲವಾರು ರೀತಿಯ ವೃತ್ತಿಗಳಿವೆ. ಆದರೆ ಅವೆಲ್ಲವುಗಳಲ್ಲೇ ಶ್ರೇಷ್ಠವಾದದ್ದು ಶಿಕ್ಷಕ ವೃತ್ತಿ, ಒಬ್ಬ ವಿದ್ಯಾರ್ಥಿಗೆ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಬೋಧನೆ ಮಾಡಿ ಅವನನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುವವರೇ ಶಿಕ್ಷಕರು ಎಂದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಉಪನ್ಯಾಸ ನೀಡಿದ ಯಾದಗಿರಿ ಸರಕಾರಿ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಲಕ್ಷ್ಮಣರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಅಗತ್ಯ, ದೃಢತೆಯ ಕಡೆಗೆ ಗುರಿಯನ್ನು ಇಟ್ಟುಕೊಂಡು ನಡೆದಾಗ ನಮ್ಮ ವಿದ್ಯಾಸಂಸ್ಥೆ ನೀಡಿದ ಶಿಕ್ಷಣ ಸಾರ್ಥಕವಾಗುತ್ತದೆ. ಜೊತೆಗೆ ಮಾನವೀಯತೆಯನ್ನು ರೂಢಿಸಿಕೊಂಡು ಬಾಳಬೇಕು ಎಂದರು.
ಕಾರ್ಯಕ್ರಮದಲ್ಲಿ ಭಾರತ ಸೇವಾದಳದ ಜಿಲ್ಲಾ ಸಂಘಟಿಕರಾದ ಸೈಯದ್ ಕಮರುದ್ದೀನ್, ಟಿಜಿಟಿ ರಾಜಶೇಖರ್ ದೇಸಾಯಿ, ಶಾಲೆಯ ಮುಖ್ಯಗುರುಗಳಾದ ಶಂಕರಪ್ಪ ಬಡಗ, ಪ್ರೌಡಶಾಲೆಯ ಮುಖ್ಯಗುರುಗಳಾದ ರಾಜಮಹಮದ್ ಕೊಡಹಾಳ, ಶಿಕ್ಷಕರಾದ ಗಿರೀಶ್, ಅಮರವ್ವ, ತಿಪ್ಪೇಸ್ವಾಮಿ ಎಂ ಆರ್, ಮಹಾದೇವಿ, ಶಾಂತಕುಮಾರಿ, ಬಿಮಶಪ್ಪ, ಅನಿತಾ, ಅನಿಲ ಕುಮಾರ, ಪತ್ರಕರ್ತ ವಿರೂಪಕ್ಷಯ್ಯ ದಂಡಗಿಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.