ಯಾದಗಿರಿ | ರಾಜ್ಯ ಸರಕಾರ ದಿವಾಳಿಯಾಗಿದೆ : ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್
ಯಾದಗಿರಿ : ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರಕಾರ ಸಂಪೂರ್ಣ ದಿವಾಳಿಯಾಗಿ ಬೀದಿಗೆ ಬಂದಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಟೀಕಿಸಿದ್ದಾರೆ.
ಸರಕಾರ ನಡೆಸುತ್ತಿರುವ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆ ನೀಡುತ್ತಿದ್ದಾರೆ. ಆದರೆ, ಅದರ ಸಾಲವನ್ನು ರಾಜ್ಯದ ತೆರಿಗೆ ಹಣದಿಂದಲೇ ಭರಿಸಬೇಕಿದೆ. ಪಡಿತರ ಅಕ್ಕಿಯನ್ನು ನೀಡಲು ಆಗುತ್ತಿಲ್ಲ ಎಂಬ ಕಾರಣಕ್ಕೆ ಈ ಸರಕಾರ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಮುಡಾದಲ್ಲಿ ಏನು ಅಕ್ರಮ ನಡೆದೇ ಇಲ್ಲ ಎಂದು ಹೇಳಿದ್ದರು. ಆದರೆ, ವಕ್ಫ್ ಮಂಡಳಿಗೆ ಬಿಜೆಪಿ ಅವಧಿಯಲ್ಲಿ ನೋಟಿಸ್ ನೀಡಲಾಗಿದೆ ಎಂದು ಹೊಸ ಕಥೆ ಕಟ್ಟಲಾಗುತ್ತಿದೆ. ಆದರೆ, ನಮ್ಮ ಸರಕಾರದ ಅವಧಿಯಲ್ಲಿ ಇಂಥ ಕೆಲಸ ನಾವು ಮಾಡಿಲ್ಲ. ಸಚಿವ ಝಮೀರ್ ಅಹ್ಮದ್ ಅವರು ವಕ್ಫ್ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸೂಚನೆ ಮೇರೆಗೆ ಈ ಸಭೆ ನಡೆಸಲಾಗಿದೆ ಎಂದು ನಡುವಳಿಯಲ್ಲಿ ಬರೆಸಿದ್ದಾರೆ. ಹೀಗಾಗಿ ಝಮೀರ್ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ವಕ್ಫ್ ಹಗರಣ ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಂಡಿದೆ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಡಿ.4ರಂದು ಬೀದರ್ ಮತ್ತು ಕಲಬುರಗಿಯಲ್ಲಿ ಹೋರಾಟ ಮಾಡಲಿದ್ದಾರೆ. 5 ರಂದು ಬೆಳಗ್ಗೆ ಯಾದಗಿರಿಗೆ ಆಗಮಿಸಲಿದ್ದಾರೆ. ಸರಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ನಾವು ಸದನದ ಹೊರಗೆ ಮತ್ತು ಒಳಗೆ ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿದರು.
ಪಕ್ಷದಲ್ಲಿ ಯಾವುದೇ ಬಣ ರಾಜಕೀಯ ನಡೆದಿಲ್ಲ. ವಕ್ಫ್ ಹೋರಾಟಕ್ಕೆ ಬಿಜೆಪಿ ವರಿಷ್ಠರು ರಾಜ್ಯಾದ್ಯಂತ ಮೂರು ತಂಡ ರಚಿಸಿದ್ದಾರೆ. ಅದರಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳರ ತಂಡವಿದೆ ಎಂದ ರಾಜೀವ್, ಬಿಜೆಪಿಯಲ್ಲಿ ಕೆಲ ಭಿನ್ನಮತ ನಡೆಯುತ್ತಿರುವುದರಿಂದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಠಿಸಿದೆ ಎಂದು ಒಪ್ಪಿಕೊಂಡರು.
ಬೀದರ್ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಪಕ್ಷದ ರಾಜ್ಯ ಉಪಾಧ್ಯಕ್ಷ ನರಸಿಂಹ ನಾಯಕ (ರಾಜುಗೌಡ), ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ, ರಾಜ್ಯ ಕಾರ್ಯದರ್ಶಿ ಲಲಿತಾ ಅನಪುರ, ಶರಣು ತಳ್ಳಿಕೇರಿ, ಪ್ರಮುಖರಾದ ನಾಗರತ್ನ ಕುಪ್ಪಿ, ರಾಚನಗೌಡ ಮುದ್ನಾಳ, ಮಹೇಶರಡ್ಡಿ ಮುದ್ನಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ, ಮೇಲಪ್ಪ ಗುಳಗಿ, ಜಿಲ್ಲಾ ವಕ್ತಾರ ಹಣಮಂತ ಇಟಗಿ, ಎಚ್.ಸಿ.ಪಾಟೀಲ್, ನಗರಸಭೆ ಉಪಾಧ್ಯಕ್ಷೆ ರುಕೀಯ ಬೇಗಂ ಇದ್ದರು.