ಯಾದಗಿರಿ | ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಯುವಜನೋತ್ಸವ ಉತ್ತಮ ವೇದಿಕೆ : ಶಾಸಕ ಚೆನ್ನಾರೆಡ್ಡಿ ಪಾಟೀಲ್
ಯಾದಗಿರಿ : ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಯುವಜನೋತ್ಸವ ಉತ್ತಮ ವೇದಿಕೆಯಾಗಿದೆ. ಇದರ ಲಾಭ ಎಲ್ಲರೂ ಪಡೆಯಬೇಕೆಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದ್ದಾರೆ.
ನಗರದ ವಾಲ್ಮಿಕಿ ಭವನದಲ್ಲಿ ಶನಿವಾರ 2024-25ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರಕಾರ ಇಂತಹ ಕಾರ್ಯಕ್ರಮಗಳು ಮಾಡುವ ಉದ್ದೇಶವೆಂದರೇ ವಿದ್ಯಾರ್ಥಿಗಳಲ್ಲಿನ ವಿವಿಧ ಕಲೆಗಳು ಅನಾವರಣಗೊಳಿಸುವುದು ಆಗಿದೆ. ಇದನ್ನು ಉತ್ತಮ ರೀತಿಯಲ್ಲಿ ಪ್ರಚಾರ ಮಾಡಿ ಆಯೋಜಿಸಿದರೇ ಅನೇಕರು ಇದರ ಲಾಭ ಪಡೆಯಬಹುದು. ಕಾಟಾಚಾರಕ್ಕೆ ಉತ್ಸವ ಆಗುವುದು ಬೇಡ, ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಬೇಕೆಂದು ಶಾಸಕರು ಹೇಳಿದರು.
ಪ್ರತಿಭೆಗಳನ್ನು ಗ್ರಾಮ ಮಟ್ಟದಿಂದ ರಾಜ್ಯ, ರಾಷ್ಟ್ರಮಟ್ಟದವರೆಗೆ ಅನಾವರಣಗೊಳಿಸುವುದೇ ಯುವಜನೋತ್ಸವದ ಮುಖ್ಯ ಉದ್ದೇಶವಾಗಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಪ್ರತಿಭೆ ಮೆರೆಯಬೇಕೆಂದರು.
ನಗರಸಭೆ ಅಧ್ಯಕ್ಷರಾದ ಲಲಿತಾ ಅನಪೂರ್ ಮಾತನಾಡಿ, ದೇಶದ ಪ್ರಧಾನಿ ನರೇಂದ್ರ ಮೋದಿಯವರ ಕನಸು ಕೂಡಾ ಇದೆ ಆಗಿದೆ. ಯುವಕರು ಪ್ರತಿಭಾಶಾಲಿಗಳಾಗಿ ಮುಂದೆ ಬರಬೇಕೆಂದರು. ಹೆಚ್ಚಿನ ಮಕ್ಕಳು ಇದರಲ್ಲಿ ಭಾಗವಹಿಸುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಚನ್ನಕೇಶವ ಬಾಣತಿಹಾಳ, ಜಿಲ್ಲಾ ಪಂಚಾಯತ್ ಎನ್.ಆರ್.ಡಿ.ಎಮ್ ಎಸ್ ಕೇಂದ್ರದ ಅಧಿಕಾರಿ ಸಿದ್ದರೆಡ್ಡಿ, ಕ್ರೀಡಾ ಇಲಾಖೆಯ ಅಧೀಕ್ಷಕರಾದ ಗೋವಿಂದಪ್ಪ ಜಿ., ನಿರ್ಣಾಯಕರಾದ ನಬಿಸಾಬ ವಕೀಲರು, ಬಸವರಾಜ ಗಸ್ತಿ, ವೀರಭದ್ರಯ್ಯ ತಾತಾ, ದೊಡ್ಡಪ್ಪ ನಾಯಕ, ಗುರು ಪ್ರಸಾದ್ ವೈದ್ಯ ಇದ್ದರು.