ಯಾದಗಿರಿ | ಏಪ್ರಿಲ್ 15 ರವರೆಗೆ ನಿರಂತರ ನೀರು ಬಿಡಿ : ಸತ್ಯಂಪೇಟೆ

ಮಲ್ಲಿಕಾರ್ಜುನ
ಸುರಪುರ : ಕೃಷ್ಣಾ ಎಡದಂಡೆ ಕಾಲುವೆಗಳಿಗೆ ನೀರು ಹರಿಸುವ ಕುರಿತು ಸಲಹಾ ಸಮಿತಿ ಸಭೆಯಲ್ಲಿ ಸರಕಾರ ಕೈಗೊಂಡಿರುವ ನಿರ್ಣಯ ಅವೈಜ್ಞಾನಿಕವಾಗಿದ್ದು ಕೂಡಲೇ ಅದನ್ನು ರದ್ದುಗೊಳಿಸಿ ನಿರಂತರ ನೀರು ಹರಿಸಲು ನಿರ್ಣಯ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಸೇರಿದಂತೆ ಅನೇಕ ರೈತ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿ,ಸರಕಾರ ಏಪ್ರಿಲ್ 1 ರಿಂದ 6ರ ವರೆಗೆ ನೀರು ಬಿಡುವುದಾಗಿ ಹೇಳಿದೆ,ಅಲ್ಲದೆ ಈಗ ಮಾರ್ಚ್ 23 ರಿಂದ ಒಂದು ವಾರ ಬಂದ್ ಮಾಡಲಿದೆ. ಇದರಿಂದ ಬೇಸಿಗೆಯಾಗಿದ್ದು ಕಾಲುವೆಗಳು ಒಣಗಿ ಕೊನೆ ಭಾಗಕ್ಕೆ ನೀರು ಬರಲು ಒಂದು ವಾರಗಳ ಸಮಯ ಬೇಕಾಗಲಿದೆ, ಇದರ ಮಧ್ಯೆ ಕೇವಲ 6 ದಿನಗಳು ನೀರು ಹರಿಸುವ ನಿರ್ಣಯ ದಿಂದ ರೈತರಿಗೆ ಯಾವುದೇ ಉಪಯೋಗವಿಲ್ಲ. ಆದ್ದರಿಂದ ಅವೈಜ್ಞಾನಿಕ ನಿರ್ಣಯವನ್ನು ರದ್ದುಗೊಳಿಸಿ ಏಪ್ರಿಲ್ 15ರ ವರೆಗೆ ನಿರಂತರವಾಗಿ ನೀರು ಹರಿಸಬೇಕು.ಅಲ್ಲದೆ ಕಾಲುವೆಗಳಿಗೆ ಹರಿಸುವ ನೀರಿನ ಪ್ರಮಾಣ 0.6 ಎಂದು ತಿಳಿದು ಬಂದಿದೆ.
ಇಷ್ಟು ಕಡಿಮೆ ಪ್ರಮಾಣದ ನೀರಿನಿಂದ ಹೊಲಗಳಿಗೆ ನೀರು ತಲುಪುವುದೇ ಕಷ್ಟವಾಗಲಿದೆ. ಇನ್ನು ಕೊನೆ ಭಾಗದ ರೈತರಿಗೆ ನೀರೆ ಬರುವುದಿಲ್ಲ, ಆದ್ದರಿಂದ ಈಗ ಕೈಗೊಂಡಿರುವ ನಿರ್ಣಯವನ್ನು ಕೂಡಲೇ ರದ್ದುಗೊಳಿಸಬೇಕು ಮತ್ತು ನಿರಂತರವಾಗಿ ಏಪ್ರಿಲ್ 15ರ ತನಕ ನೀರು ಬಿಡಬೇಕು, ಇಲ್ಲವಾದಲ್ಲಿ ಎಲ್ಲ ರೈತ ಸಂಘಟನೆಗಳು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚೆನ್ನಪ್ಪ ಆನೆಗುಂದಿ, ತಾಲೂಕು ಅಧ್ಯಕ್ಷ ಧರ್ಮಣ್ಣ ದೊರೆ, ಭೀಮಣ್ಣ ಮಿಲ್ಟ್ರಿ ಲಕ್ಷ್ಮಪುರ, ಎಸ್.ಎಮ್.ಸಾಗರ, ಮಲ್ಕಣ್ಣ ಚಿಂತಿ, ಮಲ್ಲಣ್ಣ ಹುಬ್ಬಳ್ಳಿ ಇತರರು ಪತ್ರಿಕಾ ಹೇಳಿಕೆ ಮೂಲಕ ಸರಕಾರಕ್ಕೆ ಒತ್ತಾಯಿಸಿದ್ದಾರೆ.